ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮತ್ತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೊರತುಪಡಿಸಿ ಎಲ್ಲರಿಗೂ ಭಾರತವು 'ಸತ್ತ ಆರ್ಥಿಕತೆ' ಎಂದು ತಿಳಿದಿದೆ. ಏಕೆಂದರೆ, ಬಿಜೆಪಿ ನೇತೃತ್ವದ ಸರ್ಕಾರವು ಭಾರತದ ಆರ್ಥಿಕ, ರಕ್ಷಣಾ ಮತ್ತು ವಿದೇಶಾಂಗ ನೀತಿಗಳನ್ನು ನಾಶಪಡಿಸಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗುರುವಾರ ಹೇಳಿದ್ದಾರೆ.
ಸಂಸತ್ ಭವನದ ಸಂಕೀರ್ಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರತ ಮತ್ತು ಅಮೆರಿಕ ನಡುವೆ ವ್ಯಾಪಾರ ಒಪ್ಪಂದ ನಡೆಯುವ ಸಾಧ್ಯತೆಯಿದೆ ಮತ್ತು ಡೊನಾಲ್ಡ್ ಟ್ರಂಪ್ ಅದನ್ನು ರೂಪಿಸುತ್ತಾರೆ. ಆದರೆ, ಪ್ರಧಾನಿ ಮೋದಿ ಅಮೆರಿಕದ ಅಧ್ಯಕ್ಷ ಏನು ಹೇಳುತ್ತಾರೋ ಅದನ್ನು ಮಾಡುತ್ತಾರೆ ಎಂದು ಹೇಳಿದ್ದಾರೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದ ಉತ್ಪನ್ನಗಳ ಮೇಲೆ ಶೇ 25ರಷ್ಟು ಸುಂಕ ವಿಧಿಸಿ ಆದೇಶ ಹೊರಡಿಸಿದ್ದು, 'ಭಾರತ ಮತ್ತು ರಷ್ಯಾ ಈಗಾಗಲೇ 'ಸತ್ತಿರುವ' ತಮ್ಮ ಆರ್ಥಿಕತೆಯನ್ನು ಒಟ್ಟಿಗೆ ಇನ್ನಷ್ಟು ನೆಲಕಚ್ಚುವಂತೆ ಮಾಡಿಕೊಳ್ಳುತ್ತವೆ. ಭಾರತದೊಂದಿಗೆ ನಾವು ಅತ್ಯಂತ ಕಡಿಮೆ ವ್ಯಾಪಾರವನ್ನು ಮಾಡಿದ್ದೇವೆ. ಅಮೆರಿಕದ ಉತ್ಪನ್ನಗಳಿಗೆ ಇತರ ರಾಷ್ಟ್ರಗಳು ವಿಧಿಸುವ ತೆರಿಗೆಗಿಂತ ಭಾರತದ ಸುಂಕ ಅತಿ ಹೆಚ್ಚು' ಎಂದು ಕರೆದ ನಂತರ ರಾಹುಲ್ ಗಾಂಧಿ ಈ ಹೇಳಿಕೆ ನೀಡಿದ್ದಾರೆ.
ಭಾರತದ ಆರ್ಥಿಕತೆಯ ಬಗ್ಗೆ ಟ್ರಂಪ್ ಅವರ ಟೀಕೆಯ ಬಗ್ಗೆ ಕೇಳಿದಾಗ, 'ಅವರು ಹೇಳಿದ್ದು ಸರಿ, ಪ್ರಧಾನಿ ಮತ್ತು ಹಣಕಾಸು ಸಚಿವರನ್ನು ಹೊರತುಪಡಿಸಿ, ಭಾರತದ ಆರ್ಥಿಕತೆಯು ಸತ್ತ ಆರ್ಥಿಕತೆ ಎಂಬುದು ಎಲ್ಲರಿಗೂ ತಿಳಿದಿದೆ' ಎಂದು ಹೇಳಿದರು.
ಡೊನಾಲ್ಡ್ ಟ್ರಂಪ್ ಒಂದು ಸತ್ಯವನ್ನು ಹೇಳಿರುವುದು ನನಗೆ ಸಂತೋಷ ತಂದಿದೆ. ಬಿಲಿಯನೇರ್ ಗೌತಮ್ ಅದಾನಿಗೆ ಸಹಾಯ ಮಾಡಲು ಬಿಜೆಪಿ ಭಾರತದ ಆರ್ಥಿಕತೆಯನ್ನು ನಾಶಪಡಿಸಿದೆ ಎಂದು ಗಾಂಧಿ ಆರೋಪಿಸಿದರು.
'ನಮ್ಮಲ್ಲಿ ಅದ್ಭುತ ವಿದೇಶಾಂಗ ನೀತಿ ಇದೆ ಎಂದು ವಿದೇಶಾಂಗ ಸಚಿವರು ಭಾಷಣ ಮಾಡುತ್ತಾರೆ. ಒಂದೆಡೆ, ಅಮೆರಿಕ ನಿಮ್ಮನ್ನು ನಿಂದಿಸುತ್ತಿದೆ ಮತ್ತು ಮತ್ತೊಂದೆಡೆ ಚೀನಾ ಬೆನ್ನಟ್ಟುತ್ತಿದೆ, ಮತ್ತು ಮೂರನೆಯದಾಗಿ ನೀವು ಜಗತ್ತಿನಾದ್ಯಂತ ನಿಯೋಗಗಳನ್ನು ಕಳುಹಿಸಿದಾಗ ಯಾವುದೇ ದೇಶ ಪಾಕಿಸ್ತಾನವನ್ನು ಖಂಡಿಸುವುದಿಲ್ಲ. ಅವರು ದೇಶವನ್ನು ಹೇಗೆ ನಡೆಸುತ್ತಿದ್ದಾರೆ? ಅವರಿಗೆ ದೇಶವನ್ನು ಹೇಗೆ ನಡೆಸಬೇಕೆಂದು ತಿಳಿದಿಲ್ಲ' ಎಂದು ಹೇಳಿದರು.