ಗುರುಗ್ರಾಮ: ವಾಕಿಂಗ್ ಮಾಡುತ್ತಿದ್ದಾಗ ಮಹಿಳೆಯೊಬ್ಬರ ಮೇಲೆ ಸಾಕು ನಾಯಿ ದಾಳಿ ಮಾಡಿರುವ ವಿಡಿಯೊವೊಂದು ವ್ಯಾಪಕ ವೈರಲ್ ಆಗುತ್ತಿದೆ.
ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯ ವಸತಿ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ವಾಕಿಂಗ್ ಮಾಡುತ್ತಿದ್ದ ಮಹಿಳೆ ಮೇಲೆ ಸಾಕು ನಾಯಿ ದಾಳಿ ಮಾಡಿದೆ. ಈ ವೇಳೆ ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದು, ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಗಾಲ್ಫ್ ಕೋರ್ಸ್ ರಸ್ತೆಯ ಒಂದು ಬದಿಯಲ್ಲಿ ಮಹಿಳೆ ವಾಕಿಂಗ್ ಮಾಡುತ್ತಿದ್ದಾಗ ಎದುರಿಗೆ ಮತ್ತೋರ್ವ ಮಹಿಳೆ ತನ್ನ ಹಸ್ಕಿ ತಳಿಯ ಸಾಕು ನಾಯಿಯನ್ನು ಹಿಡಿದು ವಾಕಿಂಗ್ ಗೆ ಬರುತ್ತಿರುತ್ತಾರೆ.
ಈ ವೇಳೆ ಎದುರಿನಿಂದ ಬಂದ ಮಹಿಳೆ ಮೇಲೆ ಹಸ್ಕಿ ನಾಯಿ ಏಕಾಏಕಿ ದಾಳಿ ಮಾಡಿದ್ದು ನಾಯಿ ಮಾಲಕಿ ಎಷ್ಟೇ ಹಿಡಿದು ಎಳೆದುಕೊಂಡರೂ ಆಕೆಯನ್ನು ಬಿಡದ ನಾಯಿ ಕೈಗೆ ಗಂಭೀರವಾಗಿ ಕಚ್ಚಿ ಗಾಯ ಮಾಡಿದೆ. ಬಳಿಕ ಸ್ಥಳೀಯರು ನಾಯಿಯನ್ನು ಹಿಡಿದುಕೊಂಡು ಎಳೆದುಕೊಂಡಿದ್ದಾರೆ.
ಬಳಿಕ ಗಾಯಾಳು ಮಹಿಳೆಯನ್ನು ಗುರುಗ್ರಾಮದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಗುರುಗ್ರಾಮ ಪೊಲೀಸರು ತನಿಖೆ ನಡೆಸಿದ್ದಾರೆ. ನಾಯಿ ದಾಳಿಯ ವಿಡಿಯೋ ಸ್ಥಳದಲ್ಲಿನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.
ಜುಲೈ 30 ರಂದು ಶೇರ್ ಮಾಡಲಾದ ಈ ವಿಡಿಯೋವನ್ನು 3 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ.