ನವದೆಹಲಿ: ಸಿಂಧೂ ನದಿ ನೀರು ಒಪ್ಪಂದ ರದ್ದು ವಿಚಾರವನ್ನು ವಿಶ್ವಸಂಸ್ಥೆಯಲ್ಲಿ ಪ್ರಸ್ತಾವಿಸಿದ್ದ ಅಮಾನಕನಂತೆ ವರ್ತಿಸಿದ್ದ ಪಾಕಿಸ್ಥಾನಕ್ಕೆ ಅದೇ ವೇದಿಕೆಯಲ್ಲಿ ಭಾರತವು ತಿರುಗೇಟು ನೀಡಿದೆ.
ತಜಕಿಸ್ತಾನದಲ್ಲಿ ನಡೆಯತ್ತಿರುವ ವಿಶ್ವಸಂಸ್ಥೆಯ ವಿಶೇಷ ಸಭೆಯಲ್ಲಿ ಸಿಂಧು ನದಿ ಒಪ್ಪಂದ ತಡೆ ವಿಚಾರವನ್ನು ಪಾಕಿಸ್ತಾನ ಪ್ರಧಾನಿ ಶಹಬಾಜ್ ಷರೀಫ್ ಅವರು ಪ್ರಸ್ತಾಪಿಸಿದ್ದರು. ಸಿಂಧು ಒಪ್ಪಂದ ತಡೆಹಿಡಿಯುವ ಮೂಲಕ ಭಾರತವು ನೀರನ್ನು ಆಯುಧವಾಗಿ ಬಳಸುತ್ತಿದೆ ಎಂದು ಆರೋಪಿಸಿದ್ದರು.
ಇದಕ್ಕೆ ಇದೇ ವೇದಿಕೆಯಲ್ಲಿ ತೀವ್ರವಾಗಿ ಕಿಡಿಕಾರಿದ ಭಾರತ, 'ಸಿಂಧು ಒಪ್ಪಂದ ರದ್ಧತಿಗೆ ಪಾಕಿಸ್ತಾನವು ಭಯೋತ್ಪಾದನೆಗೆ ನೀಡುತ್ತಿರುವ ಪ್ರೋತ್ಸಾಹವೇ ಕಾರಣ, ಸುಮ್ಮನೆ ಈ ಒಪ್ಪಂದ ತಡೆಗೆ ಬೇರೆಯವರನ್ನು ಹೊಣೆ ಮಾಡುವುದನ್ನು ನಿಲ್ಲಿಸಬೇಕೆಂದು ತಿರುಗೇಟು ನೀಡಿದೆ.
ಭಾರತದ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಕೀರ್ತಿವರ್ಧನ್ ಸಿಂಗ್ ಅವರು ಮಾತನಾಡಿ, 'ಪಾಕಿಸ್ತಾನವು ಅನಗತ್ಯವಾಗಿ ಅಂತಾರಾಷ್ಟ್ರೀಯ ವೇದಿಕೆ ಯಲ್ಲಿ ಸಿಂಧು ಒಪ್ಪಂದ ವಿಚಾರ ಪ್ರಸ್ತಾಪಿಸಿದೆ. ಸಂಬಂಧಪಡದ ವಿಚಾರ ಪ್ರಸ್ತಾಪಿಸುವ ಮೂಲಕ ಪಾಕಿಸ್ತಾನ ವೇದಿಕೆ ದುರುಪಯೋಗ ಮಾಡಿದೆ. ನಾವು ಕಠಿಣ ಪದಗಳಲ್ಲಿ ಇಂತಹ ಪ್ರಯತ್ನ ಖಂಡಿಸುತ್ತೇವೆ' ಎಂದು ಹೇಳಿದರು.
ಸದ್ಭಾವನೆ ಮತ್ತು ಮಿತ್ರತ್ವದ ಸ್ಫೂರ್ತಿ ಯಿಂದಲೇ ಈ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಒಪ್ಪಂದದ ಪೀಠಿಕೆಯೇ ಹೇಳುತ್ತದೆ. ಹೀಗಾಗಿ ಈ ಒಪ್ಪಂದವನ್ನು ಸದ್ಭಾವನೆಯಿಂದ ಗೌರವಿಸುವುದು ಅಗತ್ಯ. ಆದರೆ, ಪಾಕಿಸ್ತಾನ ಭಯೋತ್ಪಾದನೆಗೆ ಪ್ರೋತ್ಸಾಹ ನೀಡುವ ಮೂಲಕ ಈ ಒಪ್ಪಂದ ಉಲ್ಲಂಘಿಸಿದೆ' ಎಂದು ಕಿಡಿಕಾರಿದರು.