ಪಾಟ್ನಾ: ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದರಿಂದ ಅವಳನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಆಸ್ಪತ್ರೆಯಲ್ಲಿ ಹಾಸಿಗೆಗಳ ಕೊರತೆಯಿದ್ದ ಕಾರಣ ಹಲವಾರು ಗಂಟೆಗಳ ಕಾಲ ಆಕೆ ಆಂಬ್ಯುಲೆನ್ಸ್‌ನಲ್ಲಿ ಕಾದು ಮೃತಪಟ್ಟ ಘಟನೆ ಬಿಹಾರದ ಮುಜಫರ್‌ಪುರದಲ್ಲಿ ಭಾನುವಾರ (ಜೂನ್ 1) ನಡೆದಿದೆ.
ಬಾಲಕಿಯನ್ನು ಆಕೆಯ ಚಿಕ್ಕಮ್ಮನ ಮನೆಯ ಬಳಿ ಚಾಕೊಲೇಟ್ ನೀಡಿ ಆಮಿಷವೊಡ್ಡಿ, ಮುಜಫರ್‌ಪುರದ ಜೋಳದ ಹೊಲಕ್ಕೆ ಕರೆದೊಯ್ಯಲಾಗಿದ್ದು, ಮೇ 26 ರಂದು ಆಕೆಯ ಮೇಲೆ ಅತ್ಯಾಚಾರ ನಡೆಸಲಾಗಿತ್ತು.
ಅತ್ಯಾಚಾರ ಸಂತ್ರಸ್ತೆಯನ್ನು ಪಾಟ್ನಾ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ (ಪಿಎಂಸಿಎಚ್) ಕರೆದೊಯ್ಯಲಾಯಿತು, ಅಲ್ಲಿ ಶನಿವಾರ ಹಾಸಿಗೆಗಳ ಕೊರತೆಯಿಂದಾಗಿ ಆಕೆಯನ್ನು ಹಲವಾರು ಗಂಟೆಗಳ ಕಾಲ ಆಂಬ್ಯುಲೆನ್ಸ್‌ನಲ್ಲಿ ಕಾಯುವಂತೆ ಮಾಡಲಾಯಿತು. ಸಾಕಷ್ಟು ಪ್ರಯತ್ನದ ಬಳಿಕ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತು. ಆದರೆ ಗಾಯ ತುಂಬಾ ಗಂಭೀರವಾಗಿದ್ದ ಕಾರಣ ಚಿಕಿತ್ಸೆ ಫಲಕಾರಿಯಾಗದೆ ಬಾಲಕಿ ಸಾವನ್ನಪ್ಪಿದ್ದಾರೆ.
ಈ ಪ್ರಕರಣದಲ್ಲಿ ಮಾಡಲಾದ ಎಲ್ಲಾ ಆರೋಪಗಳನ್ನು ಪಾಟ್ನಾ ವೈದ್ಯಕೀಯ ಕಾಲೇಜಿನ ಅಧಿಕಾರಿಗಳು ಸಂಪೂರ್ಣವಾಗಿ ನಿರಾಕರಿಸಿದ್ದಾರೆ. ಈ ಘಟನೆಯ ಬಗ್ಗೆ ಮಾಹಿತಿ ಸಿಕ್ಕ ತಕ್ಷಣ, ಅವರು ತಕ್ಷಣ ಕ್ರಮ ಕೈಗೊಂಡು ಬಾಲಕಿಗೆ ಚಿಕಿತ್ಸೆ ನೀಡಲು ಪ್ರಾರಂಭಿಸಿದರು ಎಂದು ಅವರು ಹೇಳಿದ್ದಾರೆ.
ಬಾಲಕಿಯ ಚಿಕ್ಕಪ್ಪ ನೀಡಿದ್ದ ಮಾಹಿತಿ ಪ್ರಕಾರ, ನಾವು ಶನಿವಾರ ಬೇರೆ ಆಸ್ಪತ್ರೆಯಿಂದ ಪಿಎಂಸಿಎಚ್ಗೆ ತಲುಪಿದಾಗ, ತುರ್ತು ವಿಭಾಗದ ಸಿಬ್ಬಂದಿ ಬೆಡ್ ಇಲ್ಲ ಎಂದು ಹೇಳಿದರು. ಹಲವಾರು ವಾರ್ಡ್ಗಳಿಗೆ ನಮ್ಮನ್ನು ಅಲೆಯುವಂತೆ ಮಾಡಿದರು. ಕೊನೆಗೆ ಎಲ್ಲಿಯೂ ಬೆಡ್ ಸಿಗಲಿಲ್ಲ.
ಕೊನೆಗೆ ಮಕ್ಕಳ ಚಿಕಿತ್ಸಾ ವಿಭಾಗಕ್ಕೆ ಕಳುಹಿಸಲಾಯಿತು. ಆಕೆ ಆಂಬ್ಯುಲೆನ್ಸ್‌ನಲ್ಲಿ ಗಂಟೆಗಟ್ಟಲೆ ಕಾಯುತ್ತಿದ್ದಳು. ಕೆಲವು ರಾಜಕಾರಣಿಗಳ ಮಧ್ಯಸ್ಥಿಕೆ ಬಳಿಕ ಸಂಜೆ 5 ಗಂಟೆ ಸುಮಾರಿಗೆ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ದುರದೃಷ್ಟವಶಾತ್ ಆಕೆ ಸಾವನನಪ್ಪಿದ್ದಾಳೆ.
ಬಾಲಕಿ ಆಂಬ್ಯುಲೆನ್ಸ್ನಲ್ಲಿದ್ದಾಗ ಬಿಹಾರ ಕಾಂಗ್ರೆಸ್ ಅಧ್ಯಕ್ಷ ರಾಜೇಶ್ ರಾಮ್ ನೇತೃತ್ವದಲ್ಲಿ ಡಜನ್ಗಟ್ಟಲೆ ಕಾರ್ಮಿಕರು ಪಿಎಂಸಿಎಚ್ ತಲುಪಿ ಈ ನಿರ್ಲಕ್ಷ್ಯದ ವಿರುದ್ಧ ಪ್ರತಿಭಟಿಸಿದರು. ಪೊಲೀಸರ ಪ್ರಕಾರ, ಬಾಲಕಿಯ ಗಂಟಲು ಮತ್ತು ಎದೆಯ ಮೇಲೆ ಸೀಳಿದ ಗಾಯಗಳಿದ್ದವು. ಆರೋಪಿಗಳು ಆಕೆಯ ಗಂಟಲು ಸೀಳಿ ಕೊಲ್ಲಲು ಪ್ರಯತ್ನಿಸಿದರು ಎಂದು ಪೊಲೀಸರು ತಿಳಿಸಿದ್ದಾರೆ.