ಭೋಪಾಲ್: ಆಪರೇಷನ್ ಸಿಂಧೂರ್ ನಂತರ ಭಾರತ ಮತ್ತು ಪಾಕಿಸ್ತಾನದ ನಡುವೆ ಕದನ ವಿರಾಮಕ್ಕೆ ಮಧ್ಯವರ್ತಿಯಾಗಿದ್ದೇನೆ ಎಂದು ವಾಷಿಂಗ್ಟನ್ ಹೇಳಿಕೊಂಡ ಬೆನ್ನಲ್ಲೇ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ಫೋನ್ ಕರೆ ನಂತರ ಪ್ರಧಾನಿ ನರೇಂದ್ರ ಮೋದಿ ಸಂಪೂರ್ಣ "ಶರಣಾಗಿದ್ದಾರೆ" ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಂಗಳವಾರ ಆರೋಪಿಸಿದ್ದಾರೆ.
ಭೋಪಾಲ್‌ನಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಲೋಕಸಭೆಯ ವಿರೋಧ ಪಕ್ಷದ ನಾಯಕ, "ಟ್ರಂಪ್ ಅವರಿಂದ ಕರೆ ಬಂದಿತು ಮತ್ತು ಮೋದಿ ಜಿ ತಕ್ಷಣವೇ ಶರಣಾದರು; ಇತಿಹಾಸ ಇದಕ್ಕೆ ಸಾಕ್ಷಿಯಾಗಿದೆ. ಇದು ಬಿಜೆಪಿ-ಆರ್‌ಎಸ್‌ಎಸ್‌ನ ಗುಣ; ಅವರು ಯಾವಾಗಲೂ ತಲೆಬಾಗುತ್ತಾರೆ" ಎಂದು ಟೀಕಿಸಿದರು.
ಅಮೆರಿಕದ ಬೆದರಿಕೆಯ ಹೊರತಾಗಿಯೂ ಭಾರತ 1971 ರಲ್ಲಿ ಪಾಕಿಸ್ತಾನವನ್ನು ಮಣಿಸಿದೆ ಎಂದು ರಾಹುಲ್ ಹೇಳಿದ್ದಾರೆ.
1971ರ ಬಾಂಗ್ಲಾದೇಶ ವಿಮೋಚನಾ ಯುದ್ಧದ ಸಮಯದಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಕ್ರಮಗಳನ್ನು ಉಲ್ಲೇಖಿಸಿದ ರಾಹುಲ್ ಗಾಂಧಿ, "1971 ರಲ್ಲಿ ಅಮೆರಿಕದ ಏಳನೇ ನೌಕಾಪಡೆ ಬಂದರೂ ಇಂದಿರಾ ಗಾಂಧಿ ಜಿ 'ನಾನು ಮಾಡಬೇಕಾದ್ದನ್ನು ಮಾಡುತ್ತೇನೆ' ಎಂದು ಹೇಳಿದ್ದರು" ಎಂದರು.
"ಕಾಂಗ್ರೆಸ್ ಪಕ್ಷ ಶರಣಾಗುವುದಿಲ್ಲ. ಗಾಂಧೀಜಿ, ನೆಹರೂಜಿ, ಸರ್ದಾರ್ ಪಟೇಲ್‌ಜಿ - ಇವರು ಎಂದಿಗೂ ಶರಣಾಗುವವರಲ್ಲ. ಅವರು ಮಹಾಶಕ್ತಿಗಳ ವಿರುದ್ಧ ಹೋರಾಡುವ ಜನ" ಎಂದು ರಾಹುಲ್ ಗಾಂಧಿ ಹೇಳಿದರು.
"ನನಗೆ ಬಿಜೆಪಿ-ಆರ್‌ಎಸ್‌ಎಸ್ ಜನರ ಬಗ್ಗೆಯೂ ಗೊತ್ತು. ನೀವು ಸ್ವಲ್ಪ ಅವರ ಮೇಲೆ ಒತ್ತಡ ಹೇರಿ, ಸ್ವಲ್ಪ ಒತ್ತಾಯ ಮಾಡಿದರೆ ಅವರು ಭಯದಿಂದ ಓಡಿಹೋಗುತ್ತಾರೆ" ಎಂದು ವಾಗ್ದಾಳಿ ನಡೆಸಿದರು.
"ಡೊನಾಲ್ಡ್ ಟ್ರಂಪ್ ಅಲ್ಲಿಂದ ಕರೆ ಮಾಡಿ 'ನರೇಂದರ್... ಶರಣಾಗತಿ' ಎಂದು ಹೇಳಿದರು. ಇಲ್ಲಿ ನರೇಂದ್ರ ಮೋದಿ ಟ್ರಂಪ್ ಅವರ ಸನ್ನೆಯನ್ನು ಅನುಸರಿಸಿ 'ಯೆಸ್ ಸರ್' ಎಂದು ಶರಣಾದರು" ಎಂದು ರಾಹುಲ್ ವ್ಯಂಗ್ಯವಾಡಿದರು.