ಲಖನೌ: ಗೂಗಲ್ ಮ್ಯಾಪ್ (Google Map) ಕಾರು ಚಲಾಯಿಸಿದ ಚಾಲಕನೋರ್ವ ನಿರ್ಮಾಣ ಹಂತದ ಮೇಲ್ಸೇತುವೆ ಮೇಲೆ ಹೋಗಿ ಪೇಚಿಗೆ ಸಿಲುಕಿದ ಘಟನೆ ಉತ್ತರ ಪ್ರದೇಶದಲ್ಲಿ ವರದಿಯಾಗಿದೆ.
ಉತ್ತರ ಪ್ರದೇಶದ ಮಹಾರಾಜ್‌ಗಂಜ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಕಾರೊಂದು ಗೂಗಲ್ ಮ್ಯಾಪ್ ಆಧಾರದ ಮೇಲೆ ನಿರ್ಮಾಣ ಹಂತದಲ್ಲಿರುವ ಫ್ಲೈಓವರ್ ಮೇಲೆ ಬಂದು ಬಿದ್ದಿರುವ ಘಟನೆ ನಡೆದಿದೆ.
ಅದೃಷ್ಟವಶಾತ್ ಕಾರು ಸೇತುವೆ ಮೇಲಿಂದ ಕೆಳಗೆ ಬಿದ್ದಿಲ್ಲ.. ಹೀಗಾಗಿ ಕಾರು ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ವಿಚಾರ ತಿಳಿದ ಕೂಡಲೇ ಘಟನಾ ಸ್ಥಳಕ್ಕೆ ಧಾವಿಸಿದ ಮಹಾರಾಜಾಗಂಜ್ ಪೊಲೀಸರು ಕಾರನ್ನು ಸುರಕ್ಷಿತವಾಗಿ ಕೆಳಗಿಳಿಸಿದ್ದಾರೆ.
ಜೂನ್ 8 ರ ಭಾನುವಾರ ಈ ಘಟನೆ ನಡೆದಿದ್ದು ವರದಿಗಳ ಪ್ರಕಾರ, ಲಕ್ನೋ ನಂಬರ್ ಪ್ಲೇಟ್ ಹೊಂದಿರುವ ಕಾರು ಗೋರಖ್‌ಪುರದಿಂದ ಸೋನೌಲಿ ಗಡಿಗೆ ಪ್ರಯಾಣಿಸುತ್ತಿತ್ತು. ಕಾರು ಚಾಲಕ ಸಂಚರಣೆಗಾಗಿ ಗೂಗಲ್ ಮ್ಯಾಪ್ ಅವಲಂಬಿಸಿದ್ದರು.
ಅಲ್ಲಿ ಅಪ್ಲಿಕೇಶನ್ ಸೂಚಿಸಿದ ಮಾರ್ಗವನ್ನು ಅನುಸರಿಸುವಾಗ, ಚಾಲಕ ಫರೆಂಡಾ ಪೊಲೀಸ್ ಠಾಣೆ ಪ್ರದೇಶದ ಬಳಿ ಗೋರಖ್‌ಪುರ-ಸೋನೌಲಿ ಹೆದ್ದಾರಿಯಲ್ಲಿರುವ ನಿರ್ಮಾಣ ಹಂತದಲ್ಲಿರುವ ಫ್ಲೈಓವರ್ ಮೇಲೆ ತೆರಳಿದ್ದಾನೆ. ಈ ವೇಳೆ ನೋಡ ನೋಡುತ್ತಲೇ ಕಾರು ಸೇತುವೆಯಿಂದ ಕೆಳಕ್ಕೆ ಉರುಳಿದೆ.
ಫ್ಲೈಓವರ್‌ನ ಒಂದು ಭಾಗ ಮಾತ್ರ ಪೂರ್ಣಗೊಂಡಿದ್ದು, ಇನ್ನೊಂದು ಬದಿ ಅಪೂರ್ಣವಾಗಿಯೇ ಉಳಿದಿದೆ. ಗೂಗಲ್ ಮ್ಯಾಪ್ ತೋರಿಸಿದ ಮಾರ್ಗವು ವಾಹನದ ಚಾಲಕನನ್ನು ಅಪೂರ್ಣ ಭಾಗಕ್ಕೆ ಕೊಂಡೊಯ್ದಿತು. ಕಾರು ಮುಂದೆ ಸಾಗುತ್ತಿದ್ದಂತೆ, ಅದು ಇನ್ನೂ ನಿರ್ಮಾಣ ಹಂತದಲ್ಲಿರುವ ಜಾಗವನ್ನು ತಲುಪಿತು ಮತ್ತು ಅಂತಿಮವಾಗಿ ಸಮತೋಲನವನ್ನು ಕಳೆದುಕೊಂಡಿತು.
ಅದು ಮುಂದಕ್ಕೆ ಉರುಳಿತು. ಆದರೆ ಸಂಪೂರ್ಣವಾಗಿ ಬೀಳುವ ಬದಲು, ಸೇತುವೆ ಬದಿಯಲ್ಲಿ ಹಾಕಿದ್ದ ಮಣ್ಣಿನ ರಾಶಿ ಮೇಲೆ ಬಿದ್ದಿದೆ. ಹೀಗಾಗಿ ಕಾರು ಸೇತುವೆ ಮೇಲಿಂದ ಕೆಳಗೆ ಬೀಳುವ ಅಪಾಯದಿಂದ ತಪ್ಪಿಸಿಕೊಂಡಿದೆ. ಚಾಲಕ ಕೂಡ ಪ್ರಾಣಾಪಾಯದಿಂದ ಪಾರಾಗಿದ್ದಾನೆ.