ಕೇರಳ: ಶ್ರೀಲಂಕಾದ ಕೊಲೊಂಬೊದಿಂದ ಮುಂಬೈಗೆ ಸರಕು ಸಾಗಿಸುತ್ತಿದ್ದ ಬೃಹತ್ ಹಡಗಿನಲ್ಲಿ ಬೆಂಕಿ ಕಾಣಿಸಿಕೊಂಡ ಘಟನೆ ನಡೆದಿದೆ. ಕೇರಳ ಕರಾವಳಿ ಪ್ರದೇಶದಲ್ಲಿ ವಿದೇಶಿ ಹಡಗು ಅಗ್ನಿ ದುರಂತಕ್ಕೆ ಗುರಿಯಾಗಿದೆ. ಭಾರಿ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡಿದೆ.
ಕೊಲಂಬೊದಿಂದ ಮುಂಬೈಗೆ ತೆರಳುತ್ತಿದ್ದ ಹಡಗಿನಲ್ಲಿ ಜೂನ್ 9 ರಂದು ಬೆಂಕಿ ಕಾಣಿಸಿಕೊಂಡಿತು. ಭಾರತೀಯ ನೌಕಾಪಡೆ ತಕ್ಷಣ ತುರ್ತು ಕರೆಗೆ ಸ್ಪಂದಿಸಿ, INS ಸೂರತ್ ಮೂಲಕ 18 ಸಿಬ್ಬಂದಿಯನ್ನು ರಕ್ಷಿಸಿತು. ರಕ್ಷಿಸಲಾದವರಲ್ಲಿ ಐವರು ಗಾಯಗೊಂಡಿದ್ದು, ಇಬ್ಬರು ಗಂಭೀರ ಸ್ಥಿತಿಯಲ್ಲಿದ್ದಾರೆ. ರಕ್ಷಿಸಿದ ಸಿಬ್ಬಂದಿಯೊಂದಿಗೆ INS ಸೂರತ್ ಜೂನ್ 9 ರಂದು ರಾತ್ರಿ 10:45ಕ್ಕೆ ಮಂಗಳೂರಿನ NMPAಗೆ ಆಗಮಿಸಿತು.
ಹಡಗಿನಲ್ಲಿದ್ದ 22 ಸಿಬ್ಬಂದಿಗಳ ಪೈಕಿ 18 ಸಿಬ್ಬಂದಿಯನ್ನು ಭಾರತೀಯ ಸೇನಾ ಪಡೆ ರಕ್ಷಿಸಿದೆ. ಆದರೆ ನಾಲ್ವರು ಸಿಬ್ಬಂದಿಗಳು ನಾಪತ್ತೆಯಾಗಿದ್ದಾರೆ. ಇತ್ತ ನೌಕಾಪಡೆ ನಾಪತ್ತೆಯಾಗಿರುವ ಸಿಬ್ಬಂದಿಗಳ ರಕ್ಷಣೆಗೆ ಕಾರ್ಯಾಚರಣೆ ಮುಂದುವರಿಸಿದೆ. ಗಾಯಗೊಂಡ ಸಿಬ್ಬಂದಿಯನ್ನು ಮಂಗಳೂರಿನ ಆಸ್ಪತ್ರೆಗೆ ಕರೆ ತರಲಾಗಿದೆ.
ಸಿಂಗಾಪುರದ MV ವಾನ್ ಹೈ 503 ಹಡಗು ಶ್ರೀಲಂಕಾದ ಕೊಲೊಂಬೊದಿಂದ ಸರಕು ತುಂಬಿಸಿಕೊಂಡು ಮುಂಬೈಗೆ ಸಾಗಿತ್ತು. ಕೇರಳ ಕರಾವಳಿ ಪ್ರದೇಶದ ಮೂಲಕ ಮುಂಬೈಗೆ ಸಾಗುತ್ತಿದ್ದ ವೇಳೆ ಅಗ್ನಿ ದುರಂತ ಸಂಭವಿಸಿದೆ. ಕೇರಳದ ಬೇಪೋರ್ ಕಡಲ ತೀರದಿಂದ 78 ನಾಟಿಕಲ್ ಮೈಲ್ಸ್ ದೂರದ ಆಳ ಸಮುದ್ರದಲ್ಲಿ ಘಟನೆ ಸಂಭವಿಸಿದೆ.
ಮಾಹಿತಿ ಸಿಕ್ಕ ಬೆನ್ನಲ್ಲೇ ಭಾರತ್ ನೇವಿ ಶಿಪ್ INS ಸೂರತ್ ನ ಯೋಧರು ರಕ್ಷಣೆಗೆ ಧಾವಿಸಿದ್ದಾರೆ. ಹಡಗಿನಲ್ಲಿದ್ದ ನಾಲ್ವರು ಸಿಬ್ಬಂದಿಗಳು ಕಣ್ಮರೆಯಾಗಿದ್ದಾರೆ. ಕಣ್ಮರೆಯಾದ ಸಿಬ್ಬಂದಿಗಾಗಿ ಇಂಡಿಯನ್ ಕೋಸ್ಟ್ ಗಾರ್ಡ್ ಶೋಧ ಕಾರ್ಯ ನೆಡೆಸುತ್ತಿದೆ. ರಕ್ಷಿಸಲಾದ ಸಿಬ್ಬಂದಿಯನ್ನು ಮಂಗಳೂರಿನ ನ್ಯೂ ಮಂಗಳೂರು ಪೋರ್ಟ್ ಅಥಾರಿಟಿ (NMPA) ಪಣಂಬೂರಿಗೆ ಕರೆತರಲಾಗಿದೆ.
ಇತ್ತ ಹಡಗಿನಲ್ಲಿ ಕಾಣಿಸಿಕೊಂಡಿರುವ ಬೆಂಕಿ ನಂದಿಸಲು ಕೋಸ್ಟ್ ಗಾರ್ಡ್ ಶಿಪ್ ICGS ಸಚೇತ್ ಮತ್ತು ICGS ಸಮುದ್ರ ಪ್ರೆಹರಿ ಶ್ರಮಿಸುತ್ತಿದೆ. ಹಡಗಿನಲ್ಲಿ ಚೀನಾದ 8, ತೈವಾನ್ 4 ,ಮ್ಯಾನ್ಮಾರ್ 4, ಇಂಡೋನೇಷಿಯಾದ 2 ಮಂದಿ ಸಿಬ್ಬಂದಿಗಳಿದ್ದರು.
ಹಡಗಿನಿಂದ ಸೋರಿಕೆಯಾದ ತೈಲ ಕೇರಳ ಕರಾವಳಿಗೆ ಸಮಾನಾಂತರವಾಗಿ ಹರಿಯುವ ಸಾಧ್ಯತೆಯಿದೆ. ಕಂಟೇನರ್‌ಗಳು ದಕ್ಷಿಣ-ಆಗ್ನೇಯ ದಿಕ್ಕಿನಲ್ಲಿ ಚಲಿಸುವ ಸಾಧ್ಯತೆಯಿದೆ ಎಂದು ಎಚ್ಚರಿಕೆ ನೀಡಲಾಗಿದೆ. ಹಡಗಿನಲ್ಲಿ ಬೆಂಕಿ ಹರಡುತ್ತಿದೆ. ಹಡಗು ಸಂಪೂರ್ಣವಾಗಿ ಬೆಂಕಿಗಾಹುತಿಯಾಗಿದೆ ಎಂದು ಕೋಸ್ಟ್ ಗಾರ್ಡ್ ತಿಳಿಸಿದೆ.
ಕೋಸ್ಟ್ ಗಾರ್ಡ್ ಹಡಗುಗಳು ಬೆಂಕಿ ಹೊತ್ತಿಕೊಂಡ ಹಡಗನ್ನು ಸಮೀಪಿಸಲು ಸಾಧ್ಯವಾಗುತ್ತಿಲ್ಲ.ಬೆಂಕಿ ಹೊತ್ತಿಕೊಂಡ ಹಡಗನ್ನು ಟಗ್ ಬಳಸಿ ಹೊರ ಸಮುದ್ರಕ್ಕೆ ಎಳೆಯಲಾಗುವುದು. ಹಡಗು ತೀರಕ್ಕೆ ಬರುವುದನ್ನು ತಡೆಯಲು ಟಗ್ ಬಳಸಿ ನಿಯಂತ್ರಿಸಲಾಗುತ್ತಿದೆ. ರಾತ್ರಿಯೂ ರಕ್ಷಣಾ ಕಾರ್ಯ ಮುಂದುವರಿಯಲಿದೆ ಎಂದು ಕೋಸ್ಟ್ ಗಾರ್ಡ್ ತಿಳಿಸಿದೆ. ಬೆಂಕಿ ನಂದಿಸುವ ಪ್ರಯತ್ನ ಮುಂದುವರಿಯಲಿದೆ ಎಂದು ಕೋಸ್ಟ್ ಗಾರ್ಡ್ ಡಿಐಜಿ ಸ್ಪಷ್ಟಪಡಿಸಿದ್ದಾರೆ.