ನವಿ ಮುಂಬೈ: 45 ವಯಸ್ಸಿನ ಪಾಕಿಸ್ತಾನಿ ಪ್ರಜೆಯೊಬ್ಬ ತನ್ನ 35 ವರ್ಷದ ಪತ್ನಿಯನ್ನು ಅಡುಗೆ ಮನೆಯಲ್ಲಿದ್ದ ಚಾಕುವಿನಿಂದ ಹಲವು ಬಾರಿ ಇರಿದು ಹತ್ಯೆ ಮಾಡಿದ್ದಾನೆ.
ಬಳಿಕ ಅದೇ ಚಾಕುವಿನಿಂದ ತನ್ನ ಕುತ್ತಿಗೆಗೆ ತಾನೇ ಚುಚ್ಚಿಕೊಂಡು ಸಾವನ್ನಪ್ಪಿರುವ ಘಟನೆ ನವಿ ಮುಂಬೈನ ಖಾರ್ಘರ್ ನೋಡ್‌ನಲ್ಲಿರುವ ಫ್ಲಾಟ್ ವೊಂದರಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತಪಟ್ಟ ಪಾಕಿಸ್ತಾನಿ ದಂಪತಿಗಳನ್ನು ನೋಟಂದಾಸ್ ಅಲಿಯಾಸ್ ಸಂಜಯ್ ಸಚ್‌ದೇವ್ ಮತ್ತು ಅವರ ಪತ್ನಿ ಸಪ್ನಾ ನೋಟಂಡಾಸ್ ಎಂದು ಗುರುತಿಸಲಾಗಿದೆ. ಅವರಿಬ್ಬರೂ ದೀರ್ಘಾವಧಿಯ ವೀಸಾದಲ್ಲಿದ್ದರು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮೃತ ಮಹಿಳೆಯ ಸಹೋದರಿ ಸೋಮವಾರ ಫ್ಲಾಟ್ ಗೆ ಭೇಟಿ ನೀಡಿದಾಗ ದಂಪತಿ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡುಬಂದಿದೆ. ಸಪ್ನಾ ನೋಟಂಡಾಸ್ ಸ್ಥಳದಲ್ಲಿಯೇ ಮೃತಪಟ್ಟರೆ, ಆಕೆ ಪತಿಗೆ ಚಿಕಿತ್ಸೆ ನೀಡುವಾಗ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ ಎಂದು ಉಪ ಪೊಲೀಸ್ ಆಯುಕ್ತ ಪ್ರಶಾಂತ್ ಮೋಹಿತೆ ತಿಳಿಸಿದ್ದಾರೆ.
ಜಗಳದ ಹಿನ್ನೆಲೆಯಲ್ಲಿ ನೋಟಂದಾಸ್ ಅಡುಗೆ ಮನೆಯಲ್ಲಿದ್ದ ಚಾಕುವಿನಿಂದ ಪತ್ನಿ ಮೇಲೆ ಹಲ್ಲೆ ನಡೆಸಿದ್ದು, ಕುತ್ತಿಗೆ, ಬೆನ್ನು ಮತ್ತು ಭುಜದ ಮೇಲೆ ಹಲವು ಬಾರಿ ಇರಿದಿರುವುದರಿಂದ ಆಕೆ ಸಾವನ್ನಪ್ಪಿದ್ದಾರೆ. ಬಳಿಕ ಅದೇ ಚಾಕುವಿನಿಂದ ನೋಟಂದಾಸ್ ತನ್ನ ಕುತ್ತಿಗೆಗೆ ತಾನೇ ಇರಿದುಕೊಂಡು ಸಾವನ್ನಪ್ಪಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಅವರು ತಿಳಿಸಿದರು.