ಅಹಮದಾಬಾದ್: ಗುಜರಾತ್ ನ ಅಹಮದಾಬಾದ್ ಗುರುವಾರ ಮಧ್ಯಾಹ್ನ ಬಿಜೆ ವೈದ್ಯಕೀಯ ಕಾಲೇಜಿನ ಮೆಸ್ 60ಕ್ಕೂ ಹೆಚ್ಚು ವೈದ್ಯರು ಊಟ ಮಾಡುತ್ತಿದ್ದ ವೇಳೆಯೇ ಏರ್ ಇಂಡಿಯಾ ವಿಮಾನ ಹಾಸ್ಟೇಲ್ ಕಟ್ಟಡಕ್ಕೆ ಅಪ್ಪಳಿಸಿದೆ. ದುರಂತದಲ್ಲಿ ಐವರು ವೈದ್ಯರು ಮತ್ತು ಅವರ ಕುಟುಂಬದ ನಾಲ್ವರು ಸದಸ್ಯರು ಸಾವನ್ನಪ್ಪಿದ್ದಾರೆ.
ವಿಮಾನವು ಹಾಸ್ಟೇಲ್ ಕಟ್ಟಡಕ್ಕೆ ಅಪ್ಪಳಿಸಿದಾಗ 60ಕ್ಕೂ ಹೆಚ್ಚು ವೈದ್ಯರು ಮತ್ತು ಅಡುಗೆಯವರು ಸೇರಿದಂತೆ ಮೆಸ್ ಸಿಬ್ಬಂದಿ ಒಳಗೆ ಇದ್ದರು. ಇದು ಸಾಮಾನ್ಯ ಊಟದ ಸಮಯವಾಗಿದ್ದರಿಂದ ಅನೇಕ ಕಿರಿಯ ವೈದ್ಯರು ಊಟಕ್ಕಾಗಿ ಮೆಸ್‌ಗೆ ಆಗಮಿಸಿದ್ದರು.
ದುರಂತದಲ್ಲಿ 32ಕ್ಕೂ ಹೆಚ್ಚು ಜನ ಗಾಯಗೊಂಡಿದ್ದು, ಕೆಲವರ ಸ್ಥಿತಿ ಗಂಭೀರವಾಗಿದೆ ಮತ್ತು ನಂತರ ಅವರನ್ನು ಸಿವಿಲ್, ಜೈಡಸ್, ಕೆಡಿ ಹಾಗೂ ಅಪೊಲೊ ಸೇರಿದಂತೆ ನಗರದಾದ್ಯಂತ ವಿವಿಧ ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.
ಪ್ರಾಣ ಕಳೆದುಕೊಂಡವರಲ್ಲಿ ಸಿವಿಲ್ ಆಸ್ಪತ್ರೆಯ ನರಶಸ್ತ್ರಚಿಕಿತ್ಸಕ ಡಾ. ಪ್ರದೀಪ್ ಸೋಲಂಕಿ ಅವರ ಗರ್ಭಿಣಿ ಪತ್ನಿ ಕೂಡ ಸೇರಿದ್ದಾರೆ. ವಿಮಾನ ಅಪ್ಪಳಿಸಿದಾಗ ಶ್ರೀಮತಿ ಸೋಲಂಕಿ ತಮ್ಮ ಹಾಸ್ಟೆಲ್ ಕೋಣೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು ಎನ್ನಲಾಗಿದೆ.
ಮತ್ತೊಂದು ಹೃದಯ ವಿದ್ರಾವಕ ಘಟನೆಯಲ್ಲಿ ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿ ಡಾ. ನೀಲಕಂಠ ಅವರು ಮೂವರು ಕುಟುಂಬ ಸದಸ್ಯರನ್ನು, ಅವರ ತಾಯಿ, ಮಾವ ಮತ್ತು ಚಿಕ್ಕಮ್ಮನನ್ನು ಕಳೆದುಕೊಂಡಿದ್ದಾರೆ.
ವಿಮಾನ ದುರಂತದಲ್ಲಿ ಹಾಸ್ಟೇಲ್ ಕಟ್ಟಡ ಸಂಪೂರ್ಣ ನಾಶವಾಗಿದ್ದು, ಅಲ್ಲಿ ವಾಸಮಾಡುತ್ತಿದ್ದ ವೈದ್ಯರು, ವೈದ್ಯಕೀಯ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಯನ್ನು ಸ್ಥಳಾಂತರಿಸಲಾಗಿದೆ.
ಗುಜರಾತ್ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಸೇರಿದಂತೆ 242 ಜನರನ್ನು ಹೊತ್ತ ಬೋಯಿಂಗ್ 787 ಡ್ರೀಮ್‌ಲೈನರ್(AI 171) ವಿಮಾನ ಗುರುವಾರ ಮಧ್ಯಾಹ್ನ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೇಕಾಫ್ ಆದ ಕೆಲವೇ ಕ್ಷಣಗಳಲ್ಲಿ ಮೇಘನಿನಗರ ಪ್ರದೇಶದ ವೈದ್ಯಕೀಯ ಕಾಲೇಜು ಸಂಕೀರ್ಣಕ್ಕೆ ಅಪ್ಪಳಿಸಿತ್ತು.
ಈ ದುರಂತದಲ್ಲಿ ಒಬ್ಬ ಪ್ರಯಾಣಿಕ ಹೊರತುಪಡಿಸಿ ಉಳಿದ ಎಲ್ಲಾ 241 ಪ್ರಯಾಣಿಕರು ಮತ್ತು ಸಿಬ್ಬಂದಿ ಸೇರಿದಂತೆ ಒಟ್ಟು 270ಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ.