ಅಹಮದಾಬಾದ್: ಏರ್ ಇಂಡಿಯಾ-171 ವಿಮಾನ ಅಪಘಾತ ಸಂಭವಿಸಿದ ನಾಲ್ಕು ದಿನಗಳ ನಂತರ ಡಿಎನ್‌ಎ ಹೊಂದಾಣಿಕೆಯ ಮೂಲಕ ಇದುವರೆಗೆ 119 ಬಲಿಪಶುಗಳನ್ನು ಗುರುತಿಸಲಾಗಿದೆ.
ಗುಜರಾತ್ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಸೇರಿದಂತೆ 76 ಮೃತದೇಹಗಳನ್ನು ಅವರ ಕುಟುಂಬಗಳಿಗೆ ಹಸ್ತಾಂತರಿಸಲಾಗಿದೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
ಮಂಗಳವಾರ ಸಂಜೆ ಅಥವಾ ಬುಧವಾರ ಬೆಳಗಿನ ವೇಳೆಗೆ ಎಲ್ಲಾ ಬಲಿಪಶುಗಳ ಡಿಎನ್‌ಎ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ಅಧಿಕಾರಿಯೊಬ್ಬರು ಭರವಸೆ ವ್ಯಕ್ತಪಡಿಸಿದ್ದಾರೆ.
ಜೂನ್ 12 ರಂದು ಅಹಮದಾಬಾದ್‌ನಲ್ಲಿ ಅಪಘಾತಕ್ಕೀಡಾದ ಲಂಡನ್‌ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ AI-171 ನಲ್ಲಿದ್ದ 242 ಪ್ರಯಾಣಿಕರು ಮತ್ತು ಸಿಬ್ಬಂದಿಗಳಲ್ಲಿ ರೂಪಾನಿ ಕೂಡ ಇದ್ದರು. ಅವರ ಪಾರ್ಥೀವ ಶರೀರವನ್ನು ಅವರ ಪತ್ನಿ ಅಂಜಲಿ ರೂಪಾನಿ ಮತ್ತು ಇತರ ಕುಟುಂಬ ಸದಸ್ಯರಿಗೆ ಸಿಟಿ ಸಿವಿಲ್ ಆಸ್ಪತ್ರೆಯಲ್ಲಿ ಹಸ್ತಾಂತರಿಸಲಾಯಿತು.
ಅನೇಕ ಮೃತ ದೇಹಗಳು ಗುರುತಿಸಲಾಗದಷ್ಟು ಸುಟ್ಟುಹೋಗಿವೆ ಅಥವಾ ಹಾನಿಗೊಳಗಾಗಿರುವುದರಿಂದ ಬಲಿಪಶುಗಳ ಗುರುತು ಪತ್ತೆಗೆ ಅಧಿಕಾರಿಗಳು ಡಿಎನ್ಎ ಪರೀಕ್ಷೆಗಳನ್ನು ನಡೆಸುತ್ತಿದ್ದಾರೆ.
ಸೋಮವಾರ ಸಂಜೆಯವರೆಗೆ ಡಿಎನ್ ಎ ಹೊಂದಾಣಿಕೆಯೊಂದಿಗೆ 119 ಬಲಿಪಶುಗಳನ್ನು ಗುರುತಿಸಲಾಗಿದೆ. 76 ಮೃತ ದೇಹಗಳನ್ನು ಈಗಾಗಲೇ ಅವರ ಕುಟುಂಬಗಳಿಗೆ ಹಸ್ತಾಂತರಿಸಲಾಗಿದೆ. ಈ ಮೃತರು ಗುಜರಾತ್ ಮತ್ತು ರಾಜಸ್ಥಾನದ ವಿವಿಧ ಭಾಗಗಳಿಂದ ಬಂದವರು ಎಂದು ಅಹಮದಾಬಾದ್ ಸಿವಿಲ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ರಾಕೇಶ್ ಜೋಶಿ ಸುದ್ದಿಗಾರರಿಗೆ ತಿಳಿಸಿದರು.