ನೆಲ್ಲೂರು: ಆಂಧ್ರ ಪ್ರದೇಶದ ರಸ್ತೆಯೊಂದು ಕೇವಲ 10 ದಿನಗಳ ಅಂತರದಲ್ಲಿ ಒಂದೇ ಜಾಗದಲ್ಲಿ 2 ಅಪಘಾತಗಳಿಗೆ ವೇದಿಕೆಯಾಗುವ ಮೂಲಕ ನಿಗೂಢವಾಗಿ ಮಾರ್ಪಟ್ಟಿದೆ.
ಹೌದು.. ಆಂಧ್ರಪ್ರದೇಶದ ನೆಲ್ಲೂರು-ಮುಂಬೈ ರಾಜ್ಯ ಹೆದ್ದಾರಿಯ ತಿರುವು ಅಕ್ಷರಶಃ ಅಪಘಾತ ವಲಯವಾಗಿ ಮಾರ್ಪಟ್ಟಿದ್ದು, ಈ ಜಾಗದಲ್ಲಿ ತಿರುವಿಗೆ ಮುಂದಾದ ವಾಹನಗಳು ಒಂದಲ್ಲಾ ಒಂದು ಅಪಘಾತಕ್ಕೀಡಾಗಿವೆ. ಈ ಪೈಕಿ ಎರಡು ವಾಹನಗಳ ಅಪಘಾತ ಇಲ್ಲಿನ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇದೀಗ ಈ ಜಾಗ ನಿಗೂಢತೆಗೆ ಕಾರಣವಾಗಿದೆ.
10 ದಿನಗಳ ಅಂತರದಲ್ಲಿ 2 ಅಪಘಾತ
ಇದೇ ನೆಲ್ಲೂರು-ಮುಂಬೈ ರಾಜ್ಯ ಹೆದ್ದಾರಿಯ ತಿರುವು ಪ್ರದೇಶದಲ್ಲಿ ಕೇವಲ 10 ದಿನಗಳ ಅಂತರದಲ್ಲಿ ಎರಡು ಅಪಘಾತವಾಗಿದೆ. ಇದೇ ಮೇ 5ರಂದು ಇದೇ ಜಾಗದಲ್ಲಿ ತಿರುವು ಪಡೆಯುತ್ತಿದ್ದ ಪ್ರಯಾಣಿಕರ ಆಟೋಗೆ ಎಸ್ ಯುವಿ ಕಾರೊಂದು ಢಿಕ್ಕಿಯಾಗಿತ್ತು.
ಈ ವೇಳೆ ಆಟೋದಲ್ಲಿದ್ದ ಪ್ರಯಾಣಿಕರು ಚೆಲ್ಲಾಪಿಲಿಯಾಗಿದ್ದರು. ಇದಾದ ಕೇವಲ 10 ದಿನಗಳ ನಂತರ ಅಂದರೆ ನಿನ್ನೆ ಮೇ 15ರಂದು ಇದೇ ಜಾಗದಲ್ಲಿ ಮತ್ತೊಂದು ಅಪಘಾತವಾಗಿದ್ದು, ಕಾರೊಂದು ಇದೇ ತಿರುವಿನಲ್ಲಿ ಹೋಗುತ್ತಿದ್ದಾಗ ಬೈಕ್ ಸವಾರ ಕಾರಿಗೆ ಢಿಕ್ಕಿ ಹೊಡೆದಿದ್ದಾನೆ. ಢಿಕ್ಕಿ ರಭಸಕ್ಕೆ ಬೈಕ್ ಸವಾರಿನಿಗೆ ಗಾಯವಾಗಿದ್ದು ಗಾಯಾಳುವನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇನ್ನು ಈ ರಸ್ತೆ... ಪ್ರಮುಖವಾಗಿ ಈ ತಿರುವು ಪ್ರದೇಶದಲ್ಲಿ ಆಗಿಂದಾಗ್ಗೆ ಸಾಕಷ್ಟ ಅಪಘಾತಗಳು ಸಂಭವಿಸುತ್ತಿದ್ದು, ಈ ಕುರಿತು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಕನಿಷ್ಠ ಪಕ್ಷ ಇಲ್ಲೊಂದು ಸ್ಪೀಡ್ ಬ್ರೇಕರ್ ಆದರೂ ಹಾಕಬೇಕು ಎಂದು ಸ್ಥಳೀಯರು ಆಗ್ರಹಿಸುತ್ತಿದ್ದಾರೆ.