ನವದೆಹಲಿ: ಇರಾನ್-ಇಸ್ರೇಲ್ ಸಂಘರ್ಷದ ನಡುವೆ ಟೆಹರಾನ್ ನಲ್ಲಿರುವ ಭಾರತೀಯ ರಾಯಭಾರ ಕಚೇರಿ ನಿರಂತರವಾಗಿ ಸುರಕ್ಷತೆ ಪರಿಸ್ಥಿತಿಯನ್ನು ಪರಿಶೀಲಿಸುತ್ತಿದ್ದು, ಇರಾನ್ ನಲ್ಲಿರುವ ಭಾರತೀಯ ವಿದ್ಯಾರ್ಥಿಗಳೊಂದಿಗೆ ಸಂಪರ್ಕದಲ್ಲಿದೆ. ಕೆಲ ಸಂದರ್ಭಗಳಲ್ಲಿ ಅವರನ್ನು ಸುರಕ್ಷತಾ ಜಾಗಕ್ಕೆ ಸ್ಥಳಾಂತರಿಸಲಾಗಿದೆ ಎಂದು ಕೇಂದ್ರ ಸರ್ಕಾರ ಸೋಮವಾರ ಹೇಳಿದೆ.
ಟೆಹರಾನ್ ನಲ್ಲಿರುವ ಭಾರತೀಯ ರಾಯಭಾರ ಕಚೇರಿ ನಿರಂತರವಾಗಿ ಸುರಕ್ಷತೆ ಪರಿಸ್ಥಿತಿಯನ್ನು ಪರಿಶೀಲಿಸುತ್ತಿದೆ. ಇರಾನ್ ನಲ್ಲಿರುವ ಭಾರತೀಯ ವಿದ್ಯಾರ್ಥಿಗಳಿಗೆ ಸುರಕ್ಷತೆ ಒದಗಿಸಲು ಅವರೊಂದಿಗೆ ಸಂಪರ್ಕದಲ್ಲಿರುವುದಾಗಿ ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.
ಕೆಲ ಸಂದರ್ಭಗಳಲ್ಲಿ ರಾಯಭಾರ ಕಚೇರಿಯ ನೆರವಿನೊಂದಿಗೆ ಇರಾನ್‌ನೊಳಗೆ ಸುರಕ್ಷಿತ ಸ್ಥಳಗಳಿಗೆ ವಿದ್ಯಾರ್ಥಿಗಳನ್ನು ಸ್ಥಳಾಂತರಿಸಲಾಗುತ್ತಿದೆ. ಇತರ ಆಯ್ಕೆಗಳ ಕುರಿತ ಚರ್ಚಿಸಲಾಗುತ್ತಿದೆ. ರಾಯಭಾರ ಕಚೇರಿಯು ಕಲ್ಯಾಣ ಮತ್ತು ಸುರಕ್ಷತೆಗೆ ಸಂಬಂಧಿಸಿದಂತೆ ಸಮುದಾಯದ ಮುಖಂಡರೊಂದಿಗೆ ಸಂಪರ್ಕದಲ್ಲಿದೆ ಹೇಳಿದೆ.
ಇಸ್ರೇಲ್ ಮತ್ತು ಇರಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಗಳು ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಸಲಹೆಗಳನ್ನು ನೀಡುತ್ತಿವೆ.
ಇರಾನ್‌ನಲ್ಲಿನ ಪ್ರಸ್ತುತ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಎಲ್ಲಾ ಭಾರತೀಯ ಪ್ರಜೆಗಳು ಮತ್ತು ಇರಾನ್‌ನಲ್ಲಿರುವ ಭಾರತೀಯ ಮೂಲದ ವ್ಯಕ್ತಿಗಳು ಜಾಗರೂಕರಾಗಿರಲು ಸೂಚಿಸಲಾಗಿದೆ.
ಎಲ್ಲಾ ಅನಗತ್ಯ ಓಡಾಟವನ್ನು ತಪ್ಪಿಸಿ, ರಾಯಭಾರ ಕಚೇರಿಯ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಗಮನಿಸುವಂತೆ ಮತ್ತು ಸ್ಥಳೀಯ ಅಧಿಕಾರಿಗಳ ಸಲಹೆಯಂತೆ ಸುರಕ್ಷತಾ ಪ್ರೋಟೋಕಾಲ್‌ಗಳನ್ನು ಪಾಲಿಸುವಂತೆ ಮನವಿ ಮಾಡಲಾಗಿದೆ ಎಂದು ಇರಾನ್‌ನ ಭಾರತೀಯ ರಾಯಭಾರ ಕಚೇರಿಯು ಎಕ್ಸ್ ನಲ್ಲಿ ಫೋಸ್ಟ್ ಮಾಡಿದೆ.