ಭೋಪಾಲ್: ನಾನು ಕಾಂಗ್ರೆಸ್ ಪಕ್ಷದಲ್ಲೇ ಇದ್ದರೂ, ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಪರವಾಗಿ ಕೆಲಸ ಮಾಡುತ್ತೇನೆಂದು ಮಧ್ಯಪ್ರದೇಶದ ಕಾಂಗ್ರೆಸ್ ಶಾಸಕರೊಬ್ಬರು ಹೇಳಿಗೆ ನೀಡಿದ್ದು, ಈ ಹೇಳಿಕೆ ಕಾಂಗ್ರೆಸ್ ಪಕ್ಷಕ್ಕೆ ಮುಜುಗರವನ್ನು ತಂದಿದೆ.
ಅಗರ್-ಮಾಲ್ವಾ ಜಿಲ್ಲೆಯ ಸುಸ್ನರ್ ಸ್ಥಾನದಿಂದ ಮೊದಲ ಬಾರಿಗೆ ಕಾಂಗ್ರೆಸ್ ಶಾಸಕರಾಗಿರುವ ಭೈರೋ ಸಿಂಗ್ ಅವರ ವೀಡಿಯೊವನ್ನು ರಾಜ್ಯ ಬಿಜೆಪಿ ವಕ್ತಾರ ಪಂಕಜ್ ಚತುರ್ವೇದಿ ಅವರು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಹಂಚಿಕೊಂಡಿದ್ದಾರೆ.
ಈ ವಿಡಿಯೋ ಸುಮಾರು 10 ದಿನಗಳ ಹಿಂದಿನದ್ದು ಎನ್ನಲಾಗಿದ್ದು, ಸೋಂಧಿಯಾ ಜಾತಿ ಮಹಾಸಭಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ವೇಳೆ ಭೈರೋ ಸಿಂಗ್ ಈ ಹೇಳಿಕೆ ನೀಡಿದ್ದಾರೆಂದು ಹೇಳಲಾಗುತ್ತಿದೆ.
ವಿಡಿಯೋದಲ್ಲಿ ಸಿಂಗ್ ಅವರು, ನಾನು ಕಾಂಗ್ರೆಸ್ ಪಕ್ಷದಲ್ಲೇ ಇದ್ದರೂ, ನಾನೂ ಕೂಡ ಆರ್‌ಎಸ್‌ಎಸ್ ಪರ ಕೆಲಸ ಮಾಡುತ್ತಿದ್ದೇನೆ. ಆರ್‌ಎಸ್‌ಎಸ್ ಜೊತೆ ನಂಟು ಹೊಂದಿದ್ದೇನೆಂದು ಹೇಳಿದ್ದಾರೆ.
ಈ ವಿಡಿಯೋವನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಪಂಕಜ್ ಚತುರ್ವೇದಿ ಅವರು, ರಾಹುಲ್ ಗಾಂಧಿ, ನೀವು ಅನಗತ್ಯವಾಗಿ ಆರ್‌ಎಸ್‌ಎಸ್ ಅನ್ನು ಶಪಿಸುತ್ತೀರಿ. ನಿಮ್ಮ ಪಕ್ಷದ ಶಾಸಕ ಭೈರೋ ಸಿಂಗ್ ಅವರು ಆರ್‌ಎಸ್‌ಎಸ್‌ನೊಂದಿಗೆ ಸಂಬಂಧ ಹೊಂದಿರುವುದಾಗಿ ಬಹಿರಂಗವಾಗಿ ಹೇಳಿದ್ದಾರೆ. ಈಗಲಾದರೂ ನೀವು ನಿದ್ರೆಯಿಂದ ಎಚ್ಚರಗೊಳ್ಳಬೇಕು. ನಿಮ್ಮ ಪಕ್ಷದಲ್ಲಿನ ಸ್ಲೀಪರ್ ಸೆಲ್‌ಗಳು, ಕುದುರೆಗಳನ್ನು ಹುಡುಕಬೇಡಿ. ನಿಮ್ಮ ಪಕ್ಷದಲ್ಲಿ ಅನೇಕ ಒಳ್ಳೆಯ ಜನರು ಇರಬಹುದು, ಹೌದು ಆ ಒಳ್ಳೆಯ ಜನರು ನಿಮ್ಮ ಹೃದಯದಲ್ಲಿ ಇಲ್ಲದಿರಬಹುದು ಎಂದು ಹೇಳಿದ್ದಾರೆ.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಮಧ್ಯಪ್ರದೇಶ ರಾಜ್ಯ ಕಾಂಗ್ರೆಸ್ ವಕ್ತಾರ ಭೂಪೇಂದ್ರ ಗುಪ್ತಾ ಅವರು, ಶಾಸಕರು 'ಸಂಘ' ಎಂದರೆ ಆರ್‌ಎಸ್‌ಎಸ್ ಎಂದು ಹೇಳಿಲ್ಲ, ತಮ್ಮ ಸೋಂಧಿಯಾ ಸಮಾಜದ ಸಂಘದ ಕುರಿತು ಮಾತನಾಡಿದ್ದಾರೆ. ಆದರೆ, ಇದನ್ನೇ ಬಿಜೆಪಿ ದೊಡ್ಡದಾಗಿ ಬಿಂಬಿಸುತ್ತಿದೆ ಎಂದು ಹೇಳಿದ್ದಾರೆ.