ಬೆಂಗಳೂರು: 'ಭ್ರಷ್ಟ' ಕಾಂಗ್ರೆಸ್ ಸರ್ಕಾರದ ವಿರುದ್ಧದ ಹೋರಾಟವನ್ನು ತೀವ್ರಗೊಳಿಸುವಂತೆ ಕೇಂದ್ರ ಗೃಹ ಸಚಿವ ಮತ್ತು ಪಕ್ಷದ ಹಿರಿಯ ನಾಯಕ ಅಮಿತ್ ಶಾ ಅವರು ರಾಜ್ಯ ಬಿಜೆಪಿ ಘಟಕಕ್ಕೆ ಸಲಹೆ ಮತ್ತು ಸೂಚನೆ ನೀಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಶುಕ್ರವಾರ ಹೇಳಿದ್ದಾರೆ.
ಆದಿಚುಂಚನಗಿರಿ ವಿಶ್ವವಿದ್ಯಾಲಯ(ಎಸಿಯು) ಬೆಂಗಳೂರು ಕ್ಯಾಂಪಸ್, ಬಿಜಿಎಸ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಉದ್ಘಾಟಿಸಲು ಅಮಿತ್ ಶಾ ಇಂದು ಬೆಂಗಳೂರಿಗೆ ಆಗಮಿಸಿದ್ದರು.
ಸುದ್ದಿಗಾರರೊಂದಿಗೆ ಮಾತನಾಡಿದ ವಿಜಯೇಂದ್ರ, "ಇಂದು ಬೆಳಗ್ಗೆ, ನಾನು, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಹಾಗೂ ಶಾಸಕ ಅರವಿಂದ್ ಬೆಲ್ಲದ್ ಅವರೊಂದಿಗೆ ಅಮಿತ್ ಶಾ ಜಿ ಅವರನ್ನು ಭೇಟಿ ಮಾಡಿದೆವು. ಕರ್ನಾಟಕದ ರಾಜಕೀಯ ಸನ್ನಿವೇಶ ಮತ್ತು ಪ್ರಸ್ತುತ ಬೆಳವಣಿಗೆಗಳ ಬಗ್ಗೆ ಚರ್ಚಿಸಿದ್ದೇವೆ" ಎಂದು ಹೇಳಿದರು.
ರಾಜ್ಯ ಸರ್ಕಾರವು ಅಲ್ಪಸಂಖ್ಯಾತರನ್ನು ಓಲೈಸಲು ಮಾತ್ರ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆ. ಆದರೆ ಪ್ರಧಾನಿ ನರೇಂದ್ರ ಮೋದಿ 'ಸಬ್ಕಾ ಸಾಥ್, ಸಬ್ಕಾ ವಿಕಾಸ್, ಸಬ್ಕಾ ವಿಶ್ವಾಸ್, ಸಬ್ಕಾ ಪ್ರಾಯಸ್' ಎಂಬ ದೃಷ್ಟಿಕೋನದೊಂದಿಗೆ ಎಲ್ಲಾ ಸಮುದಾಯಗಳಿಗೆ, ಹಿಂದೂಗಳು ಮತ್ತು ಅಲ್ಪಸಂಖ್ಯಾತರಿಗೆ ನ್ಯಾಯವನ್ನು ಖಚಿತಪಡಿಸುತ್ತಿದ್ದಾರೆ ಎಂದು ಹೇಳಿದರು.
"ನಿನ್ನೆ, ವಸತಿ ಇಲಾಖೆಯಡಿಯಲ್ಲಿ, ವಸತಿ ಯೋಜನೆಗಳಲ್ಲಿ ಅಲ್ಪಸಂಖ್ಯಾತರ ಮೀಸಲಾತಿಯನ್ನು ಶೇಕಡಾ 10 ರಿಂದ 15 ಕ್ಕೆ ಹೆಚ್ಚಿಸಲಾಗಿದೆ.... ಸಿಎಂ ಸಿದ್ದರಾಮಯ್ಯ ವಿಭಜಕ ರಾಜಕೀಯ ಮಾಡುತ್ತಿದ್ದಾರೆ. ಬಿಜೆಪಿ ಇದರ ವಿರುದ್ಧ ಹೋರಾಡಲಿದೆ. ಮುಖ್ಯಮಂತ್ರಿಗಳ ನಡವಳಿಕೆ ಅವರ ಸ್ಥಾನದ ಘನತೆಗೆ ಕುಂದು ತರುತ್ತಿದೆ" ಎಂದು ವಿಜಯೇಂದ್ರ ಟೀಕಿಸಿದರು.
ಮುಖ್ಯಮಂತ್ರಿಗಳು ರಾಜ್ಯದ ಚುನಾಯಿತ ಸರ್ಕಾರದ ಮುಖ್ಯಸ್ಥ ಎಂಬುದನ್ನು ಮರೆತು "ತುಘಲಕ್ ದರ್ಬಾರ್" ನಡೆಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಜನ ಸರ್ಕಾರಕ್ಕೆ ಪಾಠ ಕಲಿಸುತ್ತಾರೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷರು ಹೇಳಿದರು.
ವಿಧಾನಸಭೆ ಅಧಿವೇಶನಕ್ಕೂ ಮುನ್ನ, ಎರಡೂ ಪಕ್ಷಗಳ ನಡುವೆ ಸರಿಯಾದ ಸಮನ್ವಯಕ್ಕಾಗಿ ಸಮಿತಿ ರಚಿಸುವ ಕುರಿತು ಜೆಡಿಎಸ್ ನಾಯಕ ಎಚ್ ಡಿ ಕುಮಾರಸ್ವಾಮಿ ಮತ್ತು ಶಾಸಕರೊಂದಿಗೆ ಬಿಜೆಪಿ ಚರ್ಚೆ ನಡೆಸಲಿದೆ ಎಂದು ವಿಜಯೇಂದ್ರ ತಿಳಿಸಿದರು.
ಜಿಲ್ಲಾ ಮತ್ತು ತಾಲ್ಲೂಕು ಪಂಚಾಯತ್ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಬಿಜೆಪಿ, ರಾಜ್ಯ ಸರ್ಕಾರದ ವಿರುದ್ಧ ಬೀದಿಗಿಳಿದು ಹೋರಾಡಬೇಕಾದ ಸಮಯ ಬಂದಿದೆ. ಬಿಜೆಪಿ ಆಂತರಿಕ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬೇಕು ಮತ್ತು ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ಈ ದಿಕ್ಕಿನಲ್ಲಿ ಪ್ರಯತ್ನಗಳು ನಡೆಯುತ್ತಿವೆ ಎಂದು ಅವರು ಹೇಳಿದರು.