ನಾಗ್ಪುರ: ಕಳೆದ 11 ವರ್ಷಗಳಲ್ಲಿ ನೀವು ನೋಡಿದ್ದು ಕೇವಲ "ನ್ಯೂಸ್ ರೀಲ್". "ನಿಜವಾದ ಸಿನಿಮಾ" ಇನ್ನೂ ಆರಂಭವಾಗಿಲ್ಲ ಎಂದು ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಶನಿವಾರ ಹೇಳಿದ್ದಾರೆ.
2029ರ ಸಾರ್ವತ್ರಿಕ ಚುನಾವಣೆಯಲ್ಲಿ ತಮ್ಮ ಪಾತ್ರದ ಕುರಿತ ಪ್ರಶ್ನೆಗೆ ಉತ್ತರಿಸಿದ ಭಾರತೀಯ ಜನತಾ ಪಕ್ಷದ ಹಿರಿಯ ನಾಯಕ, ಪಕ್ಷ, ತನ್ನ ಕಾರ್ಯಕರ್ತರಿಗೆ ಯಾವ ಜವಾಬ್ದಾರಿಗಳನ್ನು ನೀಡಬೇಕು ಎಂದು ನಿರ್ಧರಿಸುತ್ತದೆ. ತಮಗೆ ಯಾವುದೇ ಜವಾಬ್ದಾರಿ, ಸ್ಥಾನ ನೀಡಿದರೂ ಅದನ್ನು ನಿರ್ವಹಿಸುವುದಾಗಿ ತಿಳಿಸಿದ್ದಾರೆ.
ನಾಗ್ಪುರದಲ್ಲಿ ಉದಯ್ ನಿರ್ಗುಡ್ಕರ್ ಅವರೊಂದಿಗಿನ ಸಂದರ್ಶನದಲ್ಲಿ ನರೇಂದ್ರ ಮೋದಿ ಸರ್ಕಾರದ 11 ವರ್ಷಗಳ ಆಡಳಿತ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಗಡ್ಕರಿ, "ಅಭಿ ತಕ್ ಜೋ ಹುವಾ ಹೈ ವೋ ತೋ ನ್ಯೂಸ್ ರೀಲ್ ಥಿ. ಅಸಲಿ ಫಿಲ್ಮ್ ಶುರು ಹೋನಾ ಔರ್ ಬಾಕಿ ಹೈ(ನೀವು ಇಲ್ಲಿಯವರೆಗೆ ನೋಡಿರುವುದು ಕೇವಲ ನ್ಯೂಸ್ ರೀಲ್, ನಿಜವಾದ ಸಿನಿಮಾ ಇನ್ನೂ ಪ್ರಾರಂಭವಾಗಿಲ್ಲ)" ಎಂದು ಹೇಳಿದರು.
"ಪಕ್ಷವು ತನ್ನ ಕಾರ್ಯಕರ್ತರಿಗೆ ಯಾವ ಜವಾಬ್ದಾರಿ ಮತ್ತು ಕೆಲಸ ನೀಡಬೇಕು ಎಂಬುದನ್ನು ನಿರ್ಧರಿಸುತ್ತದೆ. ನನಗೆ ನೀಡುವ ಯಾವುದೇ ಜವಾಬ್ದಾರಿಯನ್ನು ನಾನು ನಿರ್ವಹಿಸುತ್ತೇನೆ." ನಾನು ಎಂದಿಗೂ ನನ್ನ ರಾಜಕೀಯ ಬಯೋಡೇಟಾವನ್ನು ಪ್ರಕಟಿಸಿಲ್ಲ ಮತ್ತು ವಿಮಾನ ನಿಲ್ದಾಣಗಳಲ್ಲಿ ತನಗಾಗಿ ಭವ್ಯ ಸ್ವಾಗತ ಆಯೋಜಿಸುವಂತೆ ಬೆಂಬಲಿಗರಿಗೆ ಹೇಳಿಲ್ಲ ಎಂದು ಗಡ್ಕರಿ ತಿಳಿಸಿದ್ದಾರೆ.
ವಿದರ್ಭದಲ್ಲಿ ರೈತರ ಆತ್ಮಹತ್ಯೆಗಳನ್ನು ನಿಲ್ಲಿಸುವ ನಿಟ್ಟಿನಲ್ಲಿ ಕೆಲಸ ಮಾಡುವುದು ತಮ್ಮ ವೈಯಕ್ತಿಕ ಆಶಯ ಎಂದು ಗಡ್ಕರಿ ಹೇಳಿದ್ದಾರೆ.
"ಇತ್ತೀಚಿನ ದಿನಗಳಲ್ಲಿ, ನಾನು ರಸ್ತೆ ಕಾಮಗಾರಿಗಳಿಗಿಂತ ಕೃಷಿ ಮತ್ತು ಇತರ ಸಾಮಾಜಿಕ ಉಪಕ್ರಮಗಳಲ್ಲಿ ಹೆಚ್ಚು ಕೆಲಸ ಮಾಡುತ್ತಿದ್ದೇನೆ" ಎಂದು ಹೇಳುವ ಮೂಲಕ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವರು ಗಮನಸೆಳೆದರು.