ಸೋಮವಾರ ಗುಜರಾತ್, ಪಂಜಾಬ್, ಪಶ್ಚಿಮ ಬಂಗಾಳ ಮತ್ತು ಕೇರಳದ ವಿಧಾನಸಭಾ ಸ್ಥಾನಗಳಿಗೆ ನಡೆದ ಉಪಚುನಾವಣೆಗಳು ಮಿಶ್ರ ಫಲಿತಾಂಶಗಳು ಲಭ್ಯವಾಗಿದ್ದು, ಗುಜರಾತ್‌ನಲ್ಲಿ ಎಎಪಿ ಮತ್ತು ಬಿಜೆಪಿ ತಲಾ ಒಂದು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದರೆ, ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಮುನ್ನಡೆ ಸಾಧಿಸಿದೆ ಮತ್ತು ಕಾಂಗ್ರೆಸ್ ನೇತೃತ್ವದ ಯುಡಿಎಫ್ ಕೇರಳದಲ್ಲಿ ಗೆಲುವು ಸಾಧಿಸಿದೆ.
ಕೇರಳ: ನಿಲಂಬೂರು ಕ್ಷೇತ್ರ ಯುಡಿಎಫ್ ವಶ
ಕೇರಳದ ಪಿಣರಾಯಿ ವಿಜಯನ್ ನೇತೃತ್ವದ ಎಲ್‌ಡಿಎಫ್ ಸರ್ಕಾರಕ್ಕೆ ಹೊಡೆತ ನೀಡುವಲ್ಲಿ, ಸೋಮವಾರ ನಡೆದ ನಿಲಂಬೂರ್ ವಿಧಾನಸಭಾ ಉಪಚುನಾವಣೆಯಲ್ಲಿ ವಿರೋಧ ಪಕ್ಷ ಯುಡಿಎಫ್ ಮುನ್ನಡೆ ಸಾಧಿಸಿದೆ. ಇನ್ನೇನು ಎಣಿಕೆ ಪೂರ್ಣಗೊಳ್ಳುವ ಹಂತಕ್ಕೆ ತಲುಪುತ್ತಿದ್ದು, ಗೆಲುವಿನ ಸನಿಹದಲ್ಲಿದೆ.
ಕಾಂಗ್ರೆಸ್‌ನ ಹಿರಿಯ ಅಭ್ಯರ್ಥಿ ಆರ್ಯದಾನ್ ಮುಹಮ್ಮದ್ ಅವರ ಪುತ್ರ, ಯುಡಿಎಫ್ ಅಭ್ಯರ್ಥಿ ಆರ್ಯದಾನ್ ಶೌಕತ್, ಸಿಪಿಐ(ಎಂ)ನ ಎಂ ಸ್ವರಾಜ್‌ಗಿಂತ 11,077 ಮತಗಳ ಮುನ್ನಡೆ ಸಾಧಿಸಿದ್ದಾರೆ.
ಈ ಉಪಚುನಾವಣೆಯನ್ನು ಎಲ್‌ಡಿಎಫ್ ಸರ್ಕಾರದ ಮೇಲಿನ ಮಧ್ಯಾವಧಿ ಜನಾಭಿಪ್ರಾಯ ಸಂಗ್ರಹವೆಂದು ವ್ಯಾಪಕವಾಗಿ ಪರಿಗಣಿಸಲಾಗಿತ್ತು. ರಾಜೀನಾಮೆ ನೀಡಿದ ಮಾಜಿ ಶಾಸಕ ಸ್ವತಂತ್ರ ಅಭ್ಯರ್ಥಿ ಪಿವಿ ಅನ್ವರ್ 18,000 ಕ್ಕೂ ಹೆಚ್ಚು ಮತಗಳನ್ನು ಗಳಿಸುವ ಮೂಲಕ ಅನೇಕರನ್ನು ಅಚ್ಚರಿಗೊಳಿಸಿದರು. ಬಿಜೆಪಿ ಅಭ್ಯರ್ಥಿ ಮೋಹನ್ ಜಾರ್ಜ್ ಬಹಳ ಹಿಂದುಳಿದಿದ್ದರು.
ನೀಲಂಬೂರು ಮತ್ತು ಯುಡಿಎಫ್ ಪಾಳಯದಾದ್ಯಂತ ಸಂಭ್ರಮಾಚರಣೆಗಳು ಭುಗಿಲೆದ್ದವು. ಕಾಂಗ್ರೆಸ್ ನಾಯಕರು ಈ ಫಲಿತಾಂಶವನ್ನು 2026ರ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಹೆಚ್ಚುತ್ತಿರುವ ಸಾರ್ವಜನಿಕ ಬೆಂಬಲದ ಸಂಕೇತವೆಂದು ಶ್ಲಾಘಿಸಿದ್ದಾರೆ.
ಪಶ್ಚಿಮ ಬಂಗಾಳ: ಕಾಳಿಗಂಜ್‌ನಲ್ಲಿ ಟಿಎಂಸಿಗೆ ಭರ್ಜರಿ ಗೆಲುವು
ಕಾಳಿಗಂಜ್ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ (TMC) ಅಭ್ಯರ್ಥಿ ಅಲಿಫಾ ಅಹಮದ್ ತಮ್ಮ ಹತ್ತಿರದ ಬಿಜೆಪಿ ಪ್ರತಿಸ್ಪರ್ಧಿ ಆಶಿಶ್ ಘೋಷ್ ವಿರುದ್ಧ 50,049 ಮತಗಳ ಅಂತರದ ಭರ್ಜರಿ ಗೆಲುವು ಸಾಧಿಸಿದ್ದಾರೆ. ಈ ವರ್ಷ ಫೆಬ್ರುವರಿಯಲ್ಲಿ ಅವರ ತಂದೆ ನಾಸಿರುದ್ದೀನ್ ಅಹ್ಮದ್ ನಿಧನರಾದ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯ ಈ ಸ್ಥಾನಕ್ಕೆ ಉಪಚುನಾವಣೆ ನಡೆದಿತ್ತು.
ಅಂತಿಮ ಸುತ್ತಿನ ಎಣಿಕೆಯ ನಂತರ, ಅಲಿಫಾ 1,02,759 ಮತಗಳನ್ನು ಗಳಿಸಿದರೆ, ಘೋಷ್ 52,710 ಮತಗಳನ್ನು ಪಡೆದಿದ್ದರು ಎಂದು ಆಯೋಗವು ತನ್ನ ವೆಬ್‌ಸೈಟ್‌ನಲ್ಲಿ ಪೋಸ್ಟ್ ಮಾಡಿದ ಅಂಕಿಅಂಶಗಳು ತಿಳಿಸಿವೆ.
ಎಡಪಕ್ಷ ಬೆಂಬಲಿತ ಕಾಂಗ್ರೆಸ್ ಅಭ್ಯರ್ಥಿ ಕಬಿಲ್ ಉದ್ದೀನ್ ಶೇಖ್ 28,348 ಮತಗಳನ್ನು ಪಡೆದು ಮೂರನೇ ಸ್ಥಾನ ಪಡೆದರು.
ಫೆಬ್ರುವರಿಯಲ್ಲಿ ನಾಸಿರುದ್ದೀನ್ ಅಹಮದ್ ಅವರ ನಿಧನದ ನಂತರ ಗುರುವಾರ ನಡೆದ ಉಪಚುನಾವಣೆಯಲ್ಲಿ ಸಂಜೆ 5 ಗಂಟೆಯವರೆಗೆ ಶೇ 69.85 ರಷ್ಟು ಮತದಾನವಾಗಿತ್ತು. ಕೆಲವು ಪ್ರತ್ಯೇಕ ಘಟನೆಗಳನ್ನು ಹೊರತುಪಡಿಸಿ, ಮತದಾನವು ಬಹುತೇಕ ಶಾಂತಿಯುತವಾಗಿತ್ತು.
ಪಂಜಾಬ್: ಲೂಧಿಯಾನ ಪಶ್ಚಿಮದಲ್ಲಿ ಎಎಪಿಗೆ ಜಯ
ಪಂಜಾಬ್‌ನ ಆಡಳಿತಾರೂಢ ಎಎಪಿ ಲುಧಿಯಾನ ಪಶ್ಚಿಮ ವಿಧಾನಸಭಾ ಕ್ಷೇತ್ರವನ್ನು ಉಳಿಸಿಕೊಂಡಿದ್ದು, ಸಂಜೀವ್ ಅರೋರಾ ತಮ್ಮ ಸಮೀಪದ ಪ್ರತಿಸ್ಪರ್ಧಿ ಮತ್ತು ಕಾಂಗ್ರೆಸ್ ಅಭ್ಯರ್ಥಿ ಭರತ್ ಭೂಷಣ್ ಅಶು ಅವರನ್ನು 10,637 ಮತಗಳ ಅಂತರದಿಂದ ಸೋಲಿಸಿದ್ದಾರೆ.
ಚುನಾವಣಾ ಆಯೋಗದ ಅಂಕಿಅಂಶಗಳ ಪ್ರಕಾರ, ಅರೋರಾ 35,179 ಮತಗಳನ್ನು ಪಡೆದರೆ, ಅಶು 24,542 ಮತಗಳನ್ನು ಪಡೆದರು. ಬಿಜೆಪಿಯ ಜೀವನ್ ಗುಪ್ತಾ 20,323 ಮತಗಳನ್ನು ಪಡೆದರೆ, ಶಿರೋಮಣಿ ಅಕಾಲಿ ದಳದ ಅಭ್ಯರ್ಥಿ ಪರುಪ್ಕರ್ ಸಿಂಗ್ ಘುಮಾನ್ 8,203 ಮತಗಳನ್ನು ಪಡೆದಿದ್ದಾರೆ.
ಎಎಪಿ ಶಾಸಕ ಗುರುಪ್ರೀತ್ ಬಸ್ಸಿ ಗೋಗಿ ಜನವರಿಯಲ್ಲಿ ನಿಧನರಾದ ಹಿನ್ನೆಲೆಯಲ್ಲಿ ಉಪಚುನಾವಣೆ ನಡೆದಿತ್ತು.
ಈ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಶೇ 51.33 ರಷ್ಟು ಮತದಾನವಾಗಿದ್ದು, ಇದು 2022ರ ವಿಧಾನಸಭಾ ಚುನಾವಣೆಯಲ್ಲಿ ದಾಖಲಾದ ಶೇ 64ಕ್ಕೆ ಹೋಲಿಸಿದರೆ ಗಮನಾರ್ಹ ಕುಸಿತವಾಗಿದೆ.
ಗುಜರಾತ್: ವಿಶಾವದರ್ ಕ್ಷೇತ್ರದಲ್ಲಿ ಎಎಪಿಗೆ ಜಯ, ಕಡಿ ಕ್ಷೇತ್ರದಲ್ಲಿ ಬಿಜೆಪಿ
ಗುಜರಾತ್‌ನ ಎರಡು ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯ ಮತ ಎಣಿಕೆ ಸೋಮವಾರ ಮುಕ್ತಾಯಗೊಂಡಿದ್ದು, ಎಎಪಿ ನಾಯಕ ಗೋಪಾಲ್ ಇಟಾಲಿಯಾ ವಿಶಾವದರ್ ಸ್ಥಾನವನ್ನು ಗೆದ್ದರೆ, ಬಿಜೆಪಿಯ ರಾಜೇಂದ್ರ ಚಾವ್ಡಾ ಕಡಿ ಸ್ಥಾನದಲ್ಲಿ ಗೆಲುವು ಸಾಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆಮ್ ಆದ್ಮಿ ಪಕ್ಷದ (ಎಎಪಿ) ಇಟಾಲಿಯಾ ತಮ್ಮ ಹತ್ತಿರದ ಪ್ರತಿಸ್ಪರ್ಧಿ ಬಿಜೆಪಿ ಅಭ್ಯರ್ಥಿ ಕಿರಿತ್ ಪಟೇಲ್ ಅವರನ್ನು 17,554 ಮತಗಳ ಅಂತರದಿಂದ ಸೋಲಿಸಿದ್ದಾರೆ.
ಚುನಾವಣಾ ಆಯೋಗ ಹಂಚಿಕೊಂಡಿರುವ ಮಾಹಿತಿಯ ಪ್ರಕಾರ, ಒಟ್ಟು 21 ಸುತ್ತಿನ ಮತ ಎಣಿಕೆಯ ಅಂತ್ಯದ ನಂತರ ಇಟಾಲಿಯಾ 75,942 ಮತಗಳನ್ನು ಪಡೆದರೆ, ಪಟೇಲ್ 58,388 ಮತಗಳನ್ನು ಪಡೆದಿದ್ದಾರೆ.
ಈಮಧ್ಯೆ, ಎಸ್‌ಸಿ-ಮೀಸಲು ಕ್ಷೇತ್ರ ಕಡಿಯಲ್ಲಿ ಬಿಜೆಪಿ ಅಭ್ಯರ್ಥಿ ರಾಜೇಂದ್ರ ಚಾವ್ಡಾ ಅವರು 16 ಸುತ್ತಿನ ಮತ ಎಣಿಕೆಯ ನಂತರ ಕಾಂಗ್ರೆಸ್‌ನ ರಮೇಶ್ ಚಾವ್ಡಾ ವಿರುದ್ಧ 35,000ಕ್ಕೂ ಹೆಚ್ಚು ಮತಗಳಿಂದ ಮುನ್ನಡೆಯಲ್ಲಿದ್ದರು. ಫೆಬ್ರುವರಿಯಲ್ಲಿ ಬಿಜೆಪಿ ಶಾಸಕ ಕರ್ಸನ್ ಸೋಲಂಕಿ ಅವರ ನಿಧನದ ನಂತರ ಈ ಸ್ಥಾನ ತೆರವಾಗಿತ್ತು.
ಪರಿಶಿಷ್ಟ ಜಾತಿ ಅಭ್ಯರ್ಥಿಗಳಿಗೆ ಮೀಸಲಾಗಿರುವ ಮೆಹ್ಸಾನಾ ಜಿಲ್ಲೆಯ ಕಡಿ ಕ್ಷೇತ್ರದಲ್ಲಿ, 22 ಸುತ್ತಿನ ಎಣಿಕೆಯ ನಂತರ ಬಿಜೆಪಿಯ ರಾಜೇಂದ್ರ ಚಾವ್ಡಾ ಅವರು ಕಾಂಗ್ರೆಸ್‌ನ ರಮೇಶ್ ಚಾವ್ಡಾ ಅವರನ್ನು 39,452 ಮತಗಳ ಅಂತರದಿಂದ ಸೋಲಿಸಿದರು.
ರಾಜೇಂದ್ರ ಚಾವ್ಡಾ 99,742 ಮತಗಳನ್ನು ಪಡೆದರೆ, ಮಾಜಿ ಕಾಂಗ್ರೆಸ್ ಶಾಸಕ ರಮೇಶ್ ಚಾವ್ಡಾ 60,290 ಮತಗಳನ್ನು ಪಡೆಯುವಲ್ಲಿ ಯಶಸ್ವಿಯಾದರು.