ನವದೆಹಲಿ:ದೆಹಲಿ- ಭೂಪಾಲ್ ಮಾರ್ಗದ ವಂದೇ ಭಾರತ್ ರೈಲಿನಲ್ಲಿ ಬಿಜೆಪಿ ಶಾಸಕರೊಬ್ಬರಿಗೆ ಸೀಟು ಬಿಡಲು ನಿರಾಕರಿಸಿದ ಪ್ರಯಾಣಿಕರೊಬ್ಬರಿಗೆ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ನಡೆದಿದೆ. ಕಳೆದ ಗುರುವಾರ ಉತ್ತರ ಪ್ರದೇಶದ ಜಾನ್ಸಿಯ ಶಾಸಕ ರಾಜೀವ್ ಸಿಂಗ್ ತನ್ನ ಪತ್ನಿ ಹಾಗೂ ಮಗನೊಂದಿಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ ಈ ಘಟನೆ ನಡೆದಿದೆ.
ಸಿಂಗ್ ಅವರು ರೈಲಿನ ಹಿಂಭಾಗದ ಬೋಗಿಯಲ್ಲಿ ಸೀಟು ಪಡೆದಿದ್ದರೆ, ಅವರ ಕುಟುಂಬ ಸದಸ್ಯರು ಮುಂಭಾಗದಲ್ಲಿ ಕುಳಿತಿದ್ದರು. ಹೀಗಾಗಿ ಅವರ ಪಕ್ಕದಲ್ಲಿ ಕುಳಿತಿದ್ದ ಪ್ರಯಾಣಿನಿಗೆ ಸೀಟು ಬಿಡಲು ಕೇಳಿದಾಗ ಆತ ನಿರಾಕರಿಸಿರುವುದಾಗಿ ವರದಿಯಾಗಿದೆ.
ನಂತರ ಜಾನ್ಸಿ ರೈಲು ನಿಲ್ದಾಣದಲ್ಲಿ ರೈಲು ಹತ್ತಿದ ಶಾಸಕರ ಡಜನ್ ಗಟ್ಟಲೇ ಬೆಂಬಲಿಗರು ಭೂಪಾಲ್ ಗೆ ತೆರಳುತ್ತಿದ್ದ ವ್ಯಕ್ತಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಚಪ್ಪಲಿಯಿಂದ ಹೊಡೆದಿದ್ದಾರೆ. ಪ್ರಯಾಣಿಕನ ಮೂಗಿನಿಂದ ರಕ್ತ ಸುರಿಯುತ್ತಿದ್ದು, ಆತನ ಬಟ್ಟೆ ರಕ್ತದಲ್ಲಿ ಒದ್ದೆಯಾಗಿರುವುದು ವಿಡಿಯೋದಲ್ಲಿದೆ.
ಸೀಟು ಬದಲಾವಣೆ ವಿಚಾರದಲ್ಲಿ ವಾಗ್ವಾದ ಉಂಟಾಗಿದೆ. ಸಿಸಿಟಿವಿ ದೃಶ್ಯಾವಳಿ ಆಧಾರದ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಜಾನ್ಸಿ ರೈಲ್ವೆ ಪೊಲೀಸ್ ವರಿಷ್ಠಾಧಿಕಾರಿ ವಿಪುಲ್ ಕುಮಾರ್ ಶ್ರೀವಾಸ್ತವ ಸ್ಪಷ್ಪಪಡಿಸಿದ್ದಾರೆ. ಸಿಂಗ್ ಅವರಿಂದ ದೂರು ಸ್ವೀಕರಿಸಿದ ಬಳಿಕ ಎನ್ ಸಿಆರ್ ಕೇಸ್ ದಾಖಲಿಸಲಾಗಿದೆ ಎಂದು ಜಾನ್ಸಿಯ GRP ಪೊಲೀಸರು ತಿಳಿಸಿದ್ದಾರೆ.
ಸಹ ಪ್ರಯಾಣಿಕ ಅಸಭ್ಯವಾಗಿ ವರ್ತಿಸಿರುವುದಾಗಿ ಶಾಸಕ ಸಿಂಗ್ ದೂರು ನೀಡಿರುವುದಾಗಿ ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದೆ.