ನವದೆಹಲಿ: ಸಂವಿಧಾನದ ಪೀಠಿಕೆಯಿಂದ ಸಮಾಜವಾದಿ ಮತ್ತು ಜಾತ್ಯತೀತ ಪದಗಳನ್ನು ತೆಗೆದುಹಾಕಲು RSS ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಒತ್ತಾಯಿಸಿದ್ದಾರೆ.
ರಾಷ್ಟ್ರ ರಾಜಧಾನಿಯಲ್ಲಿ ಗುರುವಾರ ಆಯೋಜಿಸಿದ್ದ 'ತುರ್ತು ಪರಿಸ್ಥಿತಿಗೆ 50 ವರ್ಷ' ಕಾರ್ಯಕ್ರಮದಲ್ಲಿ ಮಾತನಾಡಿದ ದತ್ತಾತ್ರೇಯ ಹೊಸಬಾಳೆ, "ತುರ್ತು ಪರಿಸ್ಥಿತಿಯ ಸಮಯದಲ್ಲಿ ಕಾಂಗ್ರೆಸ್ ಸರ್ಕಾರದಿಂದ ಜಾತ್ಯತೀತ ಮತ್ತು ಸಮಾಜವಾದ ಎಂಬ ಎರಡು ಪದಗಳನ್ನು ಸಂವಿಧಾನಕ್ಕೆ ಸೇರಿಸಲಾಯಿತು. ಅವು ಮೂಲ ಪೀಠಿಕೆಯ ಭಾಗವಾಗಿರಲಿಲ್ಲ. ಈಗ ಈ ಪದಗಳು ಪೀಠಿಕೆಯಲ್ಲಿ ಇರಬೇಕೆ ಎಂದು ಪ್ರಶ್ನಿಸಿದರು.
ತುರ್ತು ಪರಿಸ್ಥಿತಿ ಹೇರಿದ್ದಕ್ಕಾಗಿ ಕಾಂಗ್ರೆಸ್ ದೇಶದ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.
ಇಂತಹ ಕೆಲಸ ಮಾಡಿದವರು ಇಂದು ಸಂವಿಧಾನದ ಪ್ರತಿ ಹಿಡಿದು ತಿರುಗುತ್ತಿದ್ದಾರೆ. ಅವರು ಇನ್ನೂ ಕ್ಷಮೆ ಕೇಳಿಲ್ಲ, ನಿಮ್ಮ ಪೂರ್ವಜರು ಅದನ್ನು ಮಾಡಿದ್ದಾರೆ, ಇದಕ್ಕಾಗಿ ನೀವು ದೇಶದ ಕ್ಷಮೆಯಾಚಿಸಬೇಕು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯನ್ನು ಗುರಿಯಾಗಿಸಿಕೊಂಡು ಟೀಕಾ ಪ್ರಹಾರ ನಡೆಸಿದರು.
"ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಸಾವಿರಾರು ಜನರನ್ನು ಜೈಲಿಗೆ ಹಾಕಿ ಕಿರುಕುಳ ನೀಡಲಾಗಿತ್ತು. ನ್ಯಾಯಾಂಗ ಮತ್ತು ಪತ್ರಿಕಾ ಸ್ವಾತಂತ್ರ್ಯವನ್ನು ನಿರ್ಬಂಧಿಸಲಾಗಿತ್ತು. ಒತ್ತಾಯಪೂರ್ವಕವಾಗಿ ಸಂತಾನಹರಣ ಶಸ್ತ್ರಚಿಕಿತ್ಸೆಗೆ ಒಳಪಡಿಸಿತ್ತು ಎಂದು ಆರ್‌ಎಸ್‌ಎಸ್ ಪ್ರಧಾನ ಕಾರ್ಯದರ್ಶಿ ಕಿಡಿಕಾರಿದರು.