ನವದೆಹಲಿ: ಸಂವಿಧಾನದ ಪೀಠಿಕೆಯಲ್ಲಿರುವ ಜಾತ್ಯತೀತ ಮತ್ತು ಸಮಾಜವಾದಿ ಪದಗಳನ್ನು ತೆಗೆದುಹಾಕಬೇಕು ಎಂದು ಆರ್ ಎಸ್ ಎಸ್ ಮುಖಂಡ ದತ್ತಾತ್ರೇಯ ಹೊಸಬಾಳೆ ಹೇಳಿಕೆ ಬೆನ್ನಲ್ಲೇ ದೇಶಾದ್ಯಂತ ಈ ಕುರಿತು ಚರ್ಚೆ ನಡೆಯುತ್ತಿರುವಂತೆಯೇ ದಾಖಲೆ ನಿರ್ವಹಣೆ ದೃಷ್ಟಿಯಿಂದ 'ಸಂವಿಧಾನದ ಪ್ರಸ್ತಾಪನೆಯನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದು ಉಪ ರಾಷ್ಟ್ರಪತಿ ಜಗದೀಪ್ ಧಂಖರ್ ಶನಿವಾರ ಪ್ರತಿಪಾದಿಸಿದ್ದಾರೆ.
ಭಾರತವನ್ನು ಹೊರತುಪಡಿಸಿ ಬೇರೆ ಯಾವುದೇ ಸಂವಿಧಾನದ ಪೀಠಿಕೆಯು ಬದಲಾಗಿಲ್ಲ. ಆದರೆ 1976ರ 42ನೇ ಸಂವಿಧಾನ ತಿದ್ದುಪಡಿ ಕಾಯ್ದೆಯೊಂದಿಗೆ ಪೀಠಿಕೆಯನ್ನು ತಿದ್ದುಪಡಿ ಮಾಡಿದ್ದು, ಸಮಾಜವಾದಿ, ಜಾತ್ಯತೀತ ಮತ್ತು "ಸಮಗ್ರತೆ" ಪದಗಳನ್ನು ಸೇರಿಸಿದ್ದಾರೆ ಎಂದು ತಿಳಿಸಿದರು.
ಬಿ.ಆರ್. ಅಂಬೇಡ್ಕರ್ ಅವರು ಶ್ರಮವಹಿಸಿ ಸಂವಿಧಾನ ರಚಿಸಿದ್ದು, ನಾವು ಅದರತ್ತ ಖಂಡಿತವಾಗಿಯೂ ಗಮನ ಕೇಂದ್ರೀಕರಿಸಿರಬೇಕು ಎಂದು ಜಗದೀಪ್ ಧಂಖರ್ ಹೇಳಿದ್ದಾರೆ.
ಇಲ್ಲಿ ನಡೆದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಧಂಖರ್, ಸಂವಿಧಾನದ ಪೀಠಿಕೆಯಲ್ಲಿನ 'ಸಮಾಜವಾದಿ' ಮತ್ತು 'ಜಾತ್ಯತೀತ' ಪದಗಳನ್ನು ತೆಗೆದುಹಾಕಬೇಕು ಎಂಬ ದತ್ತಾತ್ರೇಯ ಹೊಸಬಾಳೆ ಹೇಳಿಕೆ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.