ಪುರಿಯ ಜಗನ್ನಾಥ ದೇವಸ್ಥಾನದ ಬಳಿ ಸಂಭವಿಸಿದ ಕಾಲ್ತುಳಿತಕ್ಕೆ ಒಡಿಶಾ ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ ಭಾನುವಾರ ಭಕ್ತರ ಕ್ಷಮೆಯಾಚಿಸಿದ್ದಾರೆ.
ಇಂದು ಭಾನುವಾರ ಮುಂಜಾನೆ ಶ್ರೀ ಗುಂಡಿಚಾ ದೇವಸ್ಥಾನದ ಬಳಿ ನಡೆದ ಕಾಲ್ತುಳಿತದಲ್ಲಿ ಸುಮಾರು 50 ಜನರು ಗಾಯಗೊಂಡಿದ್ದಾರೆ, ಮೂವರು ಮೃತಪಟ್ಟಿದ್ದು, ಗಾಯಗೊಂಡವರಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿಗಳು, "ನಾನು ಮತ್ತು ನನ್ನ ಸರ್ಕಾರ ಎಲ್ಲಾ ಜಗನ್ನಾಥ ಭಕ್ತರಿಂದ ಕ್ಷಮೆ ಯಾಚಿಸುತ್ತೇನೆ. ಪ್ರಾಣ ಕಳೆದುಕೊಂಡ ಭಕ್ತರ ಕುಟುಂಬಗಳಿಗೆ ಸಂತಾಪ ಸೂಚಿಸುತ್ತೇವೆ. ಈ ಸಂದರ್ಭದಲ್ಲಿ ದುಃಖ ಭರಿಸುವ ಶಕ್ತಿಯನ್ನು ಅವರಿಗೆ ನೀಡಬೇಕೆಂದು ಮಹಾಪ್ರಭು ಜಗನ್ನಾಥನನ್ನು ಪ್ರಾರ್ಥಿಸುತ್ತೇವೆ ಎಂದು ಮಾಝಿ ಎಕ್ಸ್ ಪೋಸ್ಟ್ ನಲ್ಲಿ ತಿಳಿಸಿದ್ದಾರೆ.
ಘಟನೆಯ ಹಿಂದಿನ ಭದ್ರತಾ ಲೋಪಗಳನ್ನು ತನಿಖೆ ಮಾಡಲಾಗುವುದು ಮತ್ತು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.
"ಈ ನಿರ್ಲಕ್ಷ್ಯವು ಕ್ಷಮಿಸಲಾಗದು. ಭದ್ರತಾ ಲೋಪದ ಬಗ್ಗೆ ತಕ್ಷಣದ ತನಿಖೆ ನಡೆಸಲಾಗುವುದು ಮತ್ತು ಜವಾಬ್ದಾರರ ವಿರುದ್ಧ ಕ್ರಮ ಕೈಗೊಳ್ಳಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ನಾನು ನಿರ್ದೇಶಿಸಿದ್ದೇನೆ ಎಂದು ಮಾಝಿ ಹೇಳಿದರು.
ರಥಯಾತ್ರೆ ಉತ್ಸವಗಳನ್ನು ವೀಕ್ಷಿಸಲು ಸಾವಿರಾರು ಭಕ್ತರು ದೇವಾಲಯದ ಬಳಿ ಜಮಾಯಿಸಿದ್ದಾಗ ನಸುಕಿನ ಜಾವ 4 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ, ಅವರಲ್ಲಿ 6 ಜನರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿಸಿದ್ದಾರೆ.