ನವದೆಹಲಿ: ಹಿಮಾಚಲ ಪ್ರದೇಶದಲ್ಲಿ ಶನಿವಾರ ಸುರಿದ ಭಾರೀ ಮಳೆ ಮತ್ತು ಹಿಮಪಾತದಿಂದಾಗಿ ಭೂಕುಸಿತ ಉಂಟಾಗಿ ಜನಜೀವನ ಅಸ್ತವ್ಯಸ್ಥವಾಗಿರುವಂತೆಯೇ ಅತ್ತ ಉತ್ತರಾಖಂಡದಲ್ಲೂ ಭೂಕುಸಿತ ಸಂಭವಿಸಿ ನಾಲ್ಕು ಮಂದಿ ಸಾವಿಗೀಡಾಗಿದ್ದಾರೆ ಎಂದು ತಿಳಿದುಬಂದಿದೆ.
ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ಹಿಮಪಾತದಲ್ಲಿ ಸಿಲುಕಿದ್ದ 50 ಕಾರ್ಮಿಕರನ್ನು ರಕ್ಷಿಸಲಾಗಿದೆ. ಆದರೆ ಉಳಿದ ಐವರನ್ನು ರಕ್ಷಿಸಲು ರಕ್ಷಣಾ ಸಿಬ್ಬಂದಿ ಹರಸಾಹಸ ಪಡುತ್ತಿದ್ದು, ದುರಂತದಲ್ಲಿ ಈ ವರೆಗೂ ನಾಲ್ವರು ಸಾವನ್ನಪ್ಪಿದ್ದಾರೆ. ರಾಂಬನ್ ಜಿಲ್ಲೆಯಲ್ಲಿ ಭಾರೀ ಹಿಮಪಾತ ಮತ್ತು ಹಲವಾರು ಭೂಕುಸಿತಗಳ ನಂತರ ಗುರುವಾರ ಸಂಜೆ ಮುಚ್ಚಲ್ಪಟ್ಟಿದ್ದ 270 ಕಿಮೀ ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯನ್ನು ಹವಾಮಾನ ಸುಧಾರಿಸಿದ ನಂತರ ಲಘು ವಾಹನಗಳಿಗೆ ಮತ್ತೆ ತೆರೆಯಲಾಗಿದೆ. ಅಂತೆಯೇ ರಸ್ತೆ ಪುನಃಸ್ಥಾಪನೆ ಕಾರ್ಯಾಚರಣೆ ನಡೆಸಲಾಗುತ್ತಿದೆ.
ಉತ್ತರಾಖಂಡದ ಚಮೋಲಿ ಜಿಲ್ಲೆಯ ಮಾನಾ ಗ್ರಾಮದಲ್ಲಿರುವ ಬಿಆರ್‌ಒ ಶಿಬಿರದಲ್ಲಿ ಹಿಮಪಾತ ಸಂಭವಿಸಿ 55 ಕಾರ್ಮಿಕರು ಹಿಮದಡಿ ಸಿಲುಕಿದ್ದರು. ಈ ಪೈಕಿ 50 ಜನರನ್ನು ಹಿಮದಿಂದ ರಕ್ಷಿಸಲಾಗಿದ್ದು, ಆದರೆ ಅವರಲ್ಲಿ ನಾಲ್ವರು ಸಾವನ್ನಪ್ಪಿದರು. ಉಳಿದ ಐವರಿಗಾಗಿ ಹುಡುಕಾಟ ನಡೆಯುತ್ತಿದೆ. ಅಂತೆಯೇ ಮಾನಾ ಮತ್ತು ಬದರಿನಾಥ್ ನಡುವಿನ ಗಡಿ ರಸ್ತೆಗಳ ಸಂಸ್ಥೆ (ಬಿಆರ್‌ಒ) ಶಿಬಿರದಲ್ಲಿ ಶುಕ್ರವಾರ ಬೆಳಿಗ್ಗೆ 5.30 ರಿಂದ 6 ಗಂಟೆಯ ನಡುವೆ ಹಿಮಪಾತ ಸಂಭವಿಸಿದೆ ಎಂದು ಸೇನೆ ತಿಳಿಸಿದೆ. ಶುಕ್ರವಾರ ರಾತ್ರಿಯ ವೇಳೆಗೆ ಅವರಲ್ಲಿ ಮೂವತ್ತಮೂರು ಜನರನ್ನು ರಕ್ಷಿಸಲಾಯಿತು. ಶುಕ್ರವಾರ ಮಳೆ ಮತ್ತು ಹಿಮಪಾತವು ರಕ್ಷಣಾ ಕಾರ್ಯಗಳಿಗೆ ಅಡ್ಡಿಯುಂಟುಮಾಡಿತು ಮತ್ತು ರಾತ್ರಿಯಾಗುತ್ತಿದ್ದಂತೆ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಯಿತು.
ರಕ್ಷಣಾ ಕಾರ್ಯಾಚರಣೆಗೆ ಸೇನೆ
ರಕ್ಷಣಾ ಕಾರ್ಯಾಚರಣೆಗೆ ಇದೀಗ ವಾಯುಸೇನೆ ಕೈ ಜೋಡಿಸಿದ್ದು, ಮಾನಾದಲ್ಲಿ ನೆಲೆಗೊಂಡಿರುವ ಸೇನೆ ಮತ್ತು ಇಂಡೋ-ಟಿಬೆಟಿಯನ್ ಗಡಿ ಪೊಲೀಸ್ (ಐಟಿಬಿಪಿ) ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಯನ್ನು ಪುನರಾರಂಭಿಸಿದರು ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಅಧಿಕಾರಿ ಎನ್ ಕೆ ಜೋಶಿ ತಿಳಿಸಿದ್ದಾರೆ. ಭಾರತೀಯ ಸೇನಾ ವಿಮಾನಯಾನದ ಮೂರು, ಐಎಎಫ್‌ನ ಎರಡು ಮತ್ತು ಸೇನೆಯಿಂದ ನೇಮಿಸಲ್ಪಟ್ಟ ಒಂದು ಸಿವಿಲ್ ಕಾಪ್ಟರ್ ಸೇರಿದಂತೆ ಆರು ಹೆಲಿಕಾಪ್ಟರ್‌ಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ ಎಂದು ಸೇನಾ ವಕ್ತಾರರು ತಿಳಿಸಿದ್ದಾರೆ. ಬದರಿನಾಥ್‌ನಿಂದ ಮೂರು ಕಿಲೋಮೀಟರ್ ದೂರದಲ್ಲಿರುವ ಮಾನಾ, ಭಾರತ-ಟಿಬೆಟ್ ಗಡಿಯಲ್ಲಿರುವ 3,200 ಮೀಟರ್ ಎತ್ತರದಲ್ಲಿರುವ ಕೊನೆಯ ಹಳ್ಳಿಯಾಗಿದೆ.
ಇತ್ತ ಕುಲ್ಲು ಜಿಲ್ಲೆಯ ಅಟಲ್ ಸುರಂಗದ ದಕ್ಷಿಣ ಪೋರ್ಟಲ್‌ನಲ್ಲಿ ಹಿಮಪಾತದ ನಂತರ ಸಿಲುಕಿಕೊಂಡಿದ್ದ ಪೊಲೀಸ್ ವಾಹನವನ್ನು ಹಿಮದಿಂದ ಹೊರ ತೆಗೆಯಲಾಗಿದೆ. ದೆಹಲಿ, ರಾಜಸ್ಥಾನ ಮತ್ತು ಹಿಮಾಚಲ ಪ್ರದೇಶದ ಕೆಲವು ಭಾಗಗಳಲ್ಲಿ ಶನಿವಾರ ಮಳೆಯಾಗಿದೆ.
ಮೇಘಸ್ಫೋಟ
ಕಾಂಗ್ರಾ ಜಿಲ್ಲೆಯ ರೋಕಾರು ಎಂಬಲ್ಲಿ ನಿರಂತರ ಮಳೆ ಮತ್ತು ಮೇಘ ಸ್ಫೋಟದಿಂದ ಉಂಟಾದ ಭಾರಿ ಭೂಕುಸಿತವು ಹಲವಾರು ವಾಹನಗಳಿಗೆ ಹಾನಿಯನ್ನುಂಟುಮಾಡಿದ್ದು, 12 ಮನೆಗಳು ನಾಶವಾಗಿದೆ. ಪೀಡಿತ ಕುಟುಂಬಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ ಮತ್ತು ಪುನಃಸ್ಥಾಪನೆ ಕಾರ್ಯ ಪ್ರಗತಿಯಲ್ಲಿದೆ ಎಂದು ಕಾಂಗ್ರಾ ಉಪ ಆಯುಕ್ತ ಹೇಮ್ ರಾಜ್ ಹೇಳಿದ್ದಾರೆ.
ಪಾಲಂಪುರ್‌ನ ಶಿವ ಜಲವಿದ್ಯುತ್ ಯೋಜನೆಯ ಬಳಿ ಒಬ್ಬ ವ್ಯಕ್ತಿ ಕಾಣೆಯಾಗಿದ್ದಾನೆ. ಅವರನ್ನು ಪತ್ತೆಹಚ್ಚಲು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದೆ. ಭಾರಿ ಹಿಮಪಾತದ ನಂತರ ಚಂಬಾದಲ್ಲಿನ ಬುಡಕಟ್ಟು ಪಂಗಿ ಕಣಿವೆಯಲ್ಲಿ ವಿದ್ಯುತ್ ಮತ್ತು ದೂರಸಂಪರ್ಕ ಸೇವೆಗಳು ಸ್ಥಗಿತಗೊಂಡಿವೆ. ತೋಹ್ಲು ನುಲ್ಲಾದಲ್ಲಿ ಸಂಭವಿಸಿದ ಭೂಕುಸಿತದಿಂದಾಗಿ ಕಿರಾತ್‌ಪುರ-ಮನಾಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಸ್ಥಗಿತಗೊಂಡಿದ್ದು, ಪ್ರವಾಸಿಗರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕುಲ್ಲುವಿನಲ್ಲಿ ಒಟ್ಟು 112 ರಸ್ತೆಗಳು ಮುಚ್ಚಲ್ಪಟ್ಟಿದ್ದು, 1,646 ಟ್ರಾನ್ಸ್‌ಫಾರ್ಮರ್‌ಗಳಿಗೆ ವಿದ್ಯುತ್ ಪೂರೈಸುವ ಕೆಲಸ ಪ್ರಗತಿಯಲ್ಲಿದೆ. ಕುಲ್ಲು-ಮನಾಲಿ ರಸ್ತೆಯನ್ನು ಸಹ ಮುಚ್ಚಲಾಗಿದ್ದು, ನಗ್ಗರ್ ಮೂಲಕ ವಾಹನ ಸಂಚಾರವನ್ನು ಬದಲಾಯಿಸಲಾಗುತ್ತಿದೆ, ಆದರೆ ಮಣಿಕರಣ್ ಮತ್ತು ಮನಾಲಿಯಲ್ಲಿ ವಿದ್ಯುತ್ ಸರಬರಾಜು ಇನ್ನೂ ಪುನಃಸ್ಥಾಪಿಸಲಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಏತನ್ಮಧ್ಯೆ, ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ ಮಧ್ಯಮದಿಂದ ಭಾರೀ ಹಿಮಪಾತ ಮತ್ತು ಮಳೆಯಾಗಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ, ಹವಾಮಾನ ಪರಿಸ್ಥಿತಿ ಸುಧಾರಿಸಿದ ನಂತರ ಶನಿವಾರ ಬೆಳಿಗ್ಗೆ ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ 66 ಕಿ.ಮೀ. ಬನಿಹಾಲ್-ನಶ್ರಿ ಪ್ರದೇಶದ ಪುನಃಸ್ಥಾಪನೆ ಕಾರ್ಯ ತೀವ್ರಗೊಂಡಿತು. ಕಿಶ್ತ್ವಾರಿ ಪಥೇರ್, ಮೌಮ್ ಪಾಸ್ಸಿ, ಹಿಂಗ್ನಿ, ಪಂಥಿಯಲ್, ಮೆಹರ್ ಮತ್ತು ದಲ್ವಾಸ್ ಸೇರಿದಂತೆ ಹನ್ನೆರಡು ಸ್ಥಳಗಳಲ್ಲಿ ಭಾರೀ ಮಳೆಯಿಂದಾಗಿ ಗುಡ್ಡ ಕುಸಿದಿದ್ದು, ಮಣ್ಣು ಕುಸಿತ ಮತ್ತು ಭೂಕುಸಿತ ಸಂಭವಿಸಿದೆ. ಆದರೆ ಖಾಜಿಗುಂಡ್ ಮತ್ತು ರಾಮ್ಸು ನಡುವಿನ ಹಿಮಪಾತವು ರಸ್ತೆ ಜಾರುವಂತೆ ಮಾಡಿದೆ.
ಮೆಹರ್ ಬಳಿ ರಸ್ತೆಯ ಒಂದು ಬದಿ ಕುಸಿದಿದ್ದು, ಕುನ್ಫರ್-ಪೀರಾ ಸುರಂಗದ ಒಂದು ಕೊಳವೆಯಲ್ಲಿ ಭಾರಿ ಭೂಕುಸಿತ ಉಂಟಾಗಿದೆ. ಶುಕ್ರವಾರ ನಿರಂತರ ಮಳೆಯಿಂದಾಗಿ ರಸ್ತೆ ದುರಸ್ತಿ ಕಾರ್ಯಕ್ಕೆ ಅಡ್ಡಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
66 ಕಿ.ಮೀ. ರಸ್ತೆಯ ಉದ್ದಕ್ಕೂ ಕನಿಷ್ಠ 16 ಸ್ಥಳಗಳು ಮಳೆಯಿಂದ ದುರ್ಬಲಗೊಂಡಿವೆ ಎಂದು ರಾಂಬನ್ ಉಪ ಆಯುಕ್ತ ಬಸೀರ್-ಉಲ್-ಹಕ್ ಚೌಧರಿ ಹೇಳಿದ್ದಾರೆ. ಶನಿವಾರ ಬೆಳಿಗ್ಗೆ ರಾಷ್ಟ್ರ ರಾಜಧಾನಿಯಲ್ಲಿ ಹಗುರ ಮಳೆಯಾಗಿದ್ದು, ಕನಿಷ್ಠ ತಾಪಮಾನವು 16.6 ಡಿಗ್ರಿ ಸೆಲ್ಸಿಯಸ್‌ಗೆ ತಲುಪಿದ್ದು, ಇದು ಋತುಮಾನದ ಸರಾಸರಿಗಿಂತ 4.1 ಡಿಗ್ರಿ ಹೆಚ್ಚಾಗಿದೆ. ಶನಿವಾರ ಬೆಳಿಗ್ಗೆ 8.30 ರವರೆಗೆ ಕಳೆದ 24 ಗಂಟೆಗಳಲ್ಲಿ ದೆಹಲಿಯಲ್ಲಿ 2 ಮಿಮೀ ಮಳೆಯಾಗಿದೆ.
ವಿವಿಧ ಹವಾಮಾನ ಕೇಂದ್ರಗಳ ಮಳೆ ಮಾಪನಗಳಲ್ಲಿ ಸಫ್ದರ್ಜಂಗ್‌ನಲ್ಲಿ 1.8 ಮಿಮೀ, ಪಾಲಂನಲ್ಲಿ 1.0 ಮಿಮೀ ಮತ್ತು ಪಿತಂಪುರದಲ್ಲಿ 4 ಮಿಮೀ ಮಳೆ ದಾಖಲಾಗಿದೆ. ಶನಿವಾರ ರಾಜಸ್ಥಾನದ ಕೆಲವು ಭಾಗಗಳಲ್ಲಿ ಹಗುರದಿಂದ ಮಧ್ಯಮ ಮಳೆಯಾಗಿದ್ದು, ಚುರುವಿನಲ್ಲಿ ಗರಿಷ್ಠ 28 ಮಿ.ಮೀ ಮಳೆಯಾಗಿದ್ದು, ನಂತರ ಚಿರಾವಾ (ಜುಂಝುನು)ದಲ್ಲಿ 18 ಮಿ.ಮೀ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.