ದುಬೈ: ನಾಲ್ಕು ತಿಂಗಳ ಮಗುವನ್ನು ಕೊಲೆ ಮಾಡಿದ ಆರೋಪದ ಮೇಲೆ ಅಬುಧಾಬಿಯಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿದ್ದ ಭಾರತೀಯ ಮಹಿಳೆಯನ್ನು ಫೆಬ್ರವರಿ 15 ರಂದು ಗಲ್ಲಿಗೇರಿಸಲಾಗಿದೆ ಎಂದು ವಿದೇಶಾಂಗ ಸಚಿವಾಲಯ ದೆಹಲಿ ಹೈಕೋರ್ಟ್‌ಗೆ ತಿಳಿಸಿದೆ.
ಅಬುಧಾಬಿಯಲ್ಲಿ ಕೊಲೆ ಆರೋಪ ಎದುರಿಸುತ್ತಿದ್ದ 33 ವರ್ಷದ ತನ್ನ ಮಗಳು ಶಹಜಾದಿ ಖಾನ್ ಬಗ್ಗೆ ಮಾಹಿತಿ ಕೋರಿ ಆಕೆಯ ತಂದೆ ಶಬ್ಬೀರ್ ಖಾನ್ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್‌ಗೆ ಕೇಂದ್ರ ಸರ್ಕಾರ ಸೋಮವಾರ ಈ ಮಾಹಿತಿ ನೀಡಿದೆ.
ಈ ಬೆಳವಣಿಗೆಯ ಬಗ್ಗೆ ಮಾಹಿತಿ ಪಡೆದ ನ್ಯಾಯಮೂರ್ತಿ ಸಚಿನ್ ದತ್ತ ಅವರು ಇದು 'ತುಂಬಾ ದುರದೃಷ್ಟಕರ' ಎಂದು ಬೇಸರ ವ್ಯಕ್ತಪಡಿಸಿದರು.
"ಯುಎಇಯ ಕಾನೂನಿನಂತೆ ಕಳೆದ ಫೆಬ್ರವರಿ 15 ರಂದು ಆಕೆಯನ್ನು ಗಲ್ಲಿಗೇರಿಸಲಾಯಿತು. ಮಾರ್ಚ್ 5 ರಂದು ಆಕೆಯ ಅಂತ್ಯಕ್ರಿಯೆ ನಡೆಯಲಿದೆ" ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ಚೇತನ್ ಶರ್ಮಾ ಅವರು ನ್ಯಾಯಾಲಯಕ್ಕೆ ತಿಳಿಸಿದರು.
ಫೆಬ್ರವರಿ 28 ರಂದು ಯುಎಇಯಲ್ಲಿರುವ ಭಾರತೀಯ ರಾಯಭಾರ ಕಚೇರಿಗೆ, ಶಹಜಾದಿ ಖಾನ್ ಅವರ ಮರಣದಂಡನೆಯ ಬಗ್ಗೆ ಅಧಿಕೃತ ಮಾಹಿತಿ ಸಿಕ್ಕಿದೆ ಎಂದು ಚೇತನ್ ಶರ್ಮಾ ಹೇಳಿದ್ದಾರೆ.
ತನ್ನ ಆರೈಕೆಯಲ್ಲಿದ್ದ ನಾಲ್ಕು ತಿಂಗಳ ಮಗುವನ್ನು ಕೊಲೆ ಮಾಡಿದ ಆರೋಪದಡಿ ಶಹಜಾದಿ ಖಾನ್ ಅವರನ್ನು ಫೆಬ್ರವರಿ 10, 2023 ರಂದು ಅಬುಧಾಬಿ ಪೊಲೀಸರು ಬಂಧಿಸಿದ್ದರು ಮತ್ತು ಪ್ರಕರಣದ ವಿಚಾರಣೆ ನಡೆಸಿದ್ದ ಅಬುಧಾಬಿ ನ್ಯಾಯಾಲಯ ಜುಲೈ 31, 2023 ರಂದು ಆಕೆಗೆ ಮರಣದಂಡನೆ ಶಿಕ್ಷೆ ವಿಧಿಸಿತ್ತು.