ಚೆನ್ನೈ: ಶಿಕ್ಷಣದಲ್ಲಿ ತ್ರಿಭಾಷಾ ನೀತಿಯ ಕುರಿತು ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು, ಉತ್ತರ ಭಾರತದ ವಿದ್ಯಾರ್ಥಿಗಳಿಗೆ ಕೇವಲ ಎರಡು ಭಾಷೆಗಳನ್ನು ಕಲಿಸಿದರೆ, ದಕ್ಷಿಣದ ವಿದ್ಯಾರ್ಥಿಗಳಿಗೆ ಮೂರನೇ ಭಾಷೆಯನ್ನು ಏಕೆ ಕಲಿಸಬೇಕು ಎಂದು ವಾದಿಸಿದ್ದಾರೆ.
ಈ ಕುರಿತು ಸಾಮಾಜಿಕ ಮಾಧ್ಯಮ Xನಲ್ಲಿ ಪೋಸ್ಟ್ ಮಾಡಿರುವ ಸ್ಟಾಲಿನ್, ಉತ್ತರ ಭಾರತದಲ್ಲಿ ಮೂರನೇ ಭಾಷೆಯಾಗಿ ಯಾವ ಭಾಷೆಯನ್ನು ಕಲಿಸಲಾಗುತ್ತಿದೆ ಎಂಬುದನ್ನು ಅವರು ಮೊದಲು ಹೇಳಬೇಕು ಎಂದು ಆಗ್ರಹಿಸಿದ್ದಾರೆ.
"ತಮಿಳುನಾಡಿನ ಕೆಲವು ಪೋಷಕರು "ತಮಿಳುನಾಡಿನ ವಿದ್ಯಾರ್ಥಿಗಳಿಗೆ ಮೂರನೇ ಭಾಷೆ ಕಲಿಯುವ ಅವಕಾಶವನ್ನು ನೀವು ಏಕೆ ನಿರಾಕರಿಸುತ್ತಿದ್ದೀರಿ?" ಎಂದು ಪ್ರಶ್ನಿಸುತ್ತಿದ್ದಾರೆ. ಆದರೆ ಉತ್ತರ ಭಾರತದಲ್ಲಿ ಮೂರನೇ ಭಾಷೆಯಾಗಿ ಯಾವ ಭಾಷೆಯನ್ನು ಕಲಿಸಲಾಗುತ್ತಿದೆ ಎಂದು ಅವರು ಏಕೆ ಹೇಳುತ್ತಿಲ್ಲ? ಎಂದು ಸ್ಟಾಲಿನ್ ಪ್ರಶ್ನಿಸಿದ್ದಾರೆ.
ಎರಡು ಭಾಷೆಗಳನ್ನು ಸರಿಯಾಗಿ ಕಲಿಸಿದರೆ, ನಾವು ಮೂರನೇ ಭಾಷೆಯನ್ನು ಕಲಿಯುವ ಅಗತ್ಯ ಎಲ್ಲಿದೆ?" ಎಂದು ಸ್ಟಾಲಿನ್ ಪ್ರಶ್ನಿಸಿದ್ದಾರೆ.
ತಮಿಳುನಾಡಿನ ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಭಾನುವಾರ ಕೇಂದ್ರ ಸರ್ಕಾರವು ರಾಜ್ಯದ ಮೇಲೆ ಹಿಂದಿ ಹೇರಲು ಮಾಡುತ್ತಿರುವ ಪ್ರಯತ್ನಗಳ ವಿರುದ್ಧ ಬಲವಾದ ಎಚ್ಚರಿಕೆ ನೀಡಿದರು. ತಮಿಳುನಾಡು ಹೊಸ ಶಿಕ್ಷಣ ನೀತಿ (NEP) ಮತ್ತು ಯಾವುದೇ ರೂಪದಲ್ಲಿ ಹಿಂದಿ ಹೇರಿಕೆಯನ್ನು ಒಪ್ಪಿಕೊಳ್ಳುವುದಿಲ್ಲ ಎಂದು ಹೇಳಿದರು