ನವದೆಹಲಿ: ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯ ಮುಖ್ವಾ ದೇವಾಲಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಗುರುವಾರ ಗಂಗಾ ದೇವಿಗೆ ಗಂಗಾರತಿ ಪೂಜೆ ಸಲ್ಲಿಸಿ ಪ್ರಾರ್ಥನೆ ಮಾಡಿದರು. ಅದರ ದೃಶ್ಯಾವಳಿಗಳು ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ. ಮುಖ್ವಾವನ್ನು ಚಳಿಗಾಲದ ವಾಸಸ್ಥಾನವೆಂದು ಪರಿಗಣಿಸಲಾಗಿದೆ.
ಮುಖ್ವಾ ದೇವಾಲಯದಲ್ಲಿ ಪ್ರಧಾನಿ ಮೋದಿ ಗಂಗಾ ಮಾತೆಗೆ ಪುರೋಹಿತರೊಂದಿಗೆ ಆರತಿ ಬೆಳಗಿದರು. ಈ ಸಂದರ್ಭದಲ್ಲಿ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಹಾಜರಿದ್ದರು.
ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರಕಾಶಿಗೆ ಆಗಮಿಸುತ್ತಿದ್ದಂತೆ ಅಪಾರ ಜನಸಮೂಹ ಅವರನ್ನು ಸ್ವಾಗತಿಸಿತು. ಅವರು ಆಗಮಿಸುತ್ತಿದ್ದಂತೆ ದೇವಾಲಯದ ಅಧಿಕಾರಿಗಳು ಅವರನ್ನು ಹಾರ ಹಾಕಿ ಸ್ವಾಗತಿಸಿದರು. ಪ್ರಧಾನಿಯವರು ತಮ್ಮನ್ನು ಭೇಟಿ ಮಾಡಲು ನೆರೆದಿದ್ದ ಜನರೊಂದಿಗೆ ಮಾತನಾಡುತ್ತಿರುವುದು ಕಂಡುಬಂತು.
ಮುಖ್ವಾ ಮಾತೆ ದೇಗುಲ ಗಂಗೆಗೆ ಅರ್ಪಿತವಾದ ಗಂಗೋತ್ರಿ ದೇವಾಲಯಕ್ಕೆ ಹೋಗುವ ದಾರಿಯಲ್ಲಿದೆ. ಪ್ರತಿ ವರ್ಷ ಚಳಿಗಾಲದಲ್ಲಿ ಅದರ ದ್ವಾರಗಳು ಮುಚ್ಚಿದ ನಂತರ ದೇವಿಯ ವಿಗ್ರಹವನ್ನು ಗಂಗೋತ್ರಿ ಧಾಮದಿಂದ ಮುಖ್ವಾ ದೇವಾಲಯಕ್ಕೆ ಸ್ಥಳಾಂತರಿಸಲಾಗುತ್ತದೆ.
ಮುಖ್ವಾದಲ್ಲಿ ಪ್ರಾರ್ಥನೆ ಸಲ್ಲಿಸಿದ ನಂತರ, ಪ್ರಧಾನಿ ಮೋದಿ ಹರ್ಸಿಲ್ ಕಣಿವೆಗೆ ತೆರಳಲಿದ್ದಾರೆ, ಅಲ್ಲಿ ಅವರು ಪಾದಯಾತ್ರೆ ಮತ್ತು ಬೈಕ್ ರ್ಯಾಲಿಗೆ ಚಾಲನೆ ನೀಡಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಪ್ರಕೃತಿಯ ಸೌಂದರ್ಯದಲ್ಲಿ ಪ್ರಧಾನಿ ಮೋದಿ ಲೀನ
ಮತ್ತೊಂದು ವಿಡಿಯೊದಲ್ಲಿ, ಮುಖ್ವಾ ದೇವಾಲಯ ಇರುವ ಉತ್ತರಕಾಶಿಯ ಹಿಮದಿಂದ ಆವೃತವಾದ ಹಿಮಾಲಯದ ಸೌಂದರ್ಯವನ್ನು ಪ್ರಧಾನಿ ಮೆಚ್ಚುತ್ತಿರುವುದು ಕಂಡುಬಂದಿದೆ.
ನೀಲಿ ಆಕಾಶದ ಹಿನ್ನೆಲೆಯಲ್ಲಿ ಎತ್ತರದಲ್ಲಿ ನಿಂತಿದ್ದ ಬೃಹತ್ ಪರ್ವತಗಳ ಸೌಂದರ್ಯವನ್ನು ಪ್ರಧಾನಿ ಮೋದಿ ತಮ್ಮ ಬೈನಾಕ್ಯುಲರ್‌ಗಳನ್ನು ತೆಗೆದುಕೊಂಡು ಝೂಮ್ ಇನ್ ಮಾಡಿ ನೋಡುತ್ತಿರುವುದು ಕಾಣಬಹುದು. ದೇವಾಲಯದ ಹೊರಗೆ ನಿಂತು ಮೋದಿಯವರು ಜನರತ್ತ ಕೈಬೀಸಿದರು.