ನವದೆಹಲಿ: ತಮಿಳುನಾಡು ಉಪಮುಖ್ಯಮಂತ್ರಿ ಎಂ.ಉದಯನಿಧಿ ಸ್ಟಾಲಿನ್ ಅವರಿಗೆ ಸುಪ್ರೀಂಕೋರ್ಟ್ ಗುರುವಾರ ಬಿಗ್ ರಿಲೀಫ್ ನೀಡಿದೆ. ‘ಸನಾತನ ಧರ್ಮ ನಿರ್ಮೂಲನೆ’ಹೇಳಿಕೆಗಾಗಿ ಯಾವುದೇ ಹೊಸ FIR ದಾಖಲಿಸಬಾರದು ಎಂದು ಆದೇಶಿಸಿದೆ.
ಸನಾತನ ಧರ್ಮ ನಿರ್ಮೂಲನೆ ಕುರಿತು ಉದಯ ನಿಧಿ ಸ್ಟಾಲಿನ್ 2023ರಲ್ಲಿ ನೀಡಿದ್ದ ಹೇಳಿಕೆಗೆ ತನ್ನ ಅನುಮತಿ ಇಲ್ಲದೆ ಹೊಸದಾಗಿ ಎಫ್ ಐಆರ್ ದಾಖಲಿಸಬಾರದು ಎಂದು ಸುಪ್ರೀಂಕೋರ್ಟ್ ಹೇಳಿದೆ.
ಎಫ್‌ಐಆರ್‌ಗಳನ್ನು ವಿಚಾರಣೆ ಮಾಡುವ ನ್ಯಾಯಾಲಯಗಳಲ್ಲಿ ವೈಯಕ್ತಿಕ ಹಾಜರಾತಿಯಿಂದ ವಿನಾಯಿತಿ ನೀಡುವ ಮಧ್ಯಂತರ ಆದೇಶವನ್ನು ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಮತ್ತು ನ್ಯಾಯಮೂರ್ತಿ ಸಂಜಯ್ ಕುಮಾರ್ ಅವರನ್ನೊಳಗೊಂಡ ನ್ಯಾಯಪೀಠ ವಿಸ್ತರಿಸಿದೆ.
ಸ್ಟಾಲಿನ್ ಪರ ವಾದಿಸಿದ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ, ಮಹಾರಾಷ್ಟ್ರ ಅಲ್ಲದೇ ಪಾಟ್ನಾ, ಜಮ್ಮು, ಬೆಂಗಳೂರಿನಲ್ಲಿ ಎಫ್ ಐಆರ್ ದಾಖಲಾಗಿದ್ದು, ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಲಾಗಿರುವ ತಮಿಳುನಾಡಿಗೆ ವರ್ಗಾಯಿಸಬೇಕು ಎಂದು ಮನವಿ ಮಾಡಿದರು.
ಮಹಾರಾಷ್ಟ್ರದ ಪರ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಸನಾತನ ಧರ್ಮ ನಿರ್ಮೂಲನೆ ಸಮ್ಮೇಳನದಲ್ಲಿ ಮಲೇರಿಯಾ, ಕೊರೊನಾ, ಢೆಂಗೀ ತರಹ ಸನಾತನ ಧರ್ಮ ನಿರ್ಮೂಲನೆ ಮಾಡಬೇಕು ಎಂದು ಉದಯ ನಿಧಿ ಸ್ಟಾಲಿನ್ ಹೇಳಿದ್ದಾರೆ. ಬೇರೊಂದು ರಾಜ್ಯದ ಮುಖ್ಯಮಂತ್ರಿಗಳು, ಬೇರೊಂದು ಧರ್ಮದ ಬಗ್ಗೆಗಿನ ಇಂತಹ ಹೇಳಿಕೆಯನ್ನು ಶ್ಲಾಘಿಸುವರೇ, ಇಸ್ಲಾಂ ಧರ್ಮವನ್ನು ನಿರ್ಮೂಲನೆ ಮಾಡಬೇಕು ಎಂದು ಹೇಳುವರೇ, ಇದು ಸಹಿಸಲಾಗದು ಎಂದರು.
ತುಷಾರ್ ಮೆಹ್ತಾ ವಾದಕ್ಕೆ ಸಿಂಘ್ವಿ ಆಕ್ಷೇಪ ವ್ಯಕ್ತಪಡಿಸಿದರು. ಅಂತಿಮವಾಗಿ ವಾದ- ವಿವಾದ ಆಲಿಸಿದ ನ್ಯಾಯಪೀಠ, ತನ್ನ ಅನುಮತಿ ಇಲ್ಲದೆ ಹೊಸದಾಗಿ ಎಫ್ ಐಆರ್ ದಾಖಲಿಸಬಾರದು ಎಂದು ತೀರ್ಪು ನೀಡಿತು.