ಮುಂಬೈ: ಮುಂಬೈನಲ್ಲಿ ವಾಸಿಸಲು ಮರಾಠಿ ಕಲಿಯುವ ಅಗತ್ಯವಿಲ್ಲ ಎಂದ ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರ್‌ಎಸ್‌ಎಸ್)ದ ಮುಖಂಡ ಸುರೇಶ್ ಭಯ್ಯಾಜಿ ಜೋಶಿ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಬೇಕು ಎಂದು ಶಿವಸೇನಾ(ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಗುರುವಾರ ಒತ್ತಾಯಿಸಿದ್ದಾರೆ.
ಮುಂಬೈನ ವಿಧಾನ ಭವನ ಸಂಕೀರ್ಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ, ಜೋಶಿ ಅವರ ಹೇಳಿಕೆ ಮುಂಬೈಯನ್ನು ವಿಭಜಿಸುವ ಆರ್‌ಎಸ್‌ಎಸ್ ಮತ್ತು ಬಿಜೆಪಿಯ ರಹಸ್ಯ ಕಾರ್ಯಸೂಚಿಯನ್ನು ಪ್ರತಿಬಿಂಬಿಸುತ್ತದೆ ಎಂದು ವಾಗ್ದಾಳಿ ನಡೆಸಿದರು.
ಬುಧವಾರ ಮುಂಬೈನ ಘಾಟ್ಕೋಪರ್ ಪ್ರದೇಶದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಜೋಶಿ, "ಮುಂಬೈಗೆ ಒಂದೇ ಭಾಷೆ ಇಲ್ಲ. ಮುಂಬೈನ ಪ್ರತಿಯೊಂದು ಭಾಗಕ್ಕೂ ವಿಭಿನ್ನ ಭಾಷೆ ಇದೆ. ಘಾಟ್ಕೋಪರ್ ಪ್ರದೇಶದ ಭಾಷೆ ಗುಜರಾತಿ. ಆದ್ದರಿಂದ ನೀವು ಮುಂಬೈನಲ್ಲಿ ವಾಸಿಸಲು ಮರಾಠಿ ಕಲಿಯುವ ಅಗತ್ಯವಿಲ್ಲ" ಎಂದು ಹೇಳಿದ್ದರು.
ಈ ವಿವಾದಾತ್ಮಕ ಹೇಳಿಕೆಗೆ ವಿರೋಧ ಪಕ್ಷಗಳಿಂದ ತೀವ್ರ ಟೀಕೆ ವ್ಯಕ್ತವಾದ ನಂತರ ಗುರುವಾರ ಜೋಶಿ ಅವರು ಮರಾಠಿ ಮುಂಬೈನ ಭಾಷೆ ಮತ್ತು ಹೊರಗಿನಿಂದ ಬಂದು ಇತರ ಭಾಷೆಗಳನ್ನು ಮಾತನಾಡುವವರು ಸಹ ಅದನ್ನು ಅರ್ಥಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ.
ಮರಾಠಿ ನನ್ನ ಮಾತೃಭಾಷೆ ಮತ್ತು ನಾನು ಅದರ ಬಗ್ಗೆ ಹೆಮ್ಮೆಪಡುತ್ತೇನೆ. ಆದರೆ ಘಾಟ್ಕೋಪರ್ ಕಾರ್ಯಕ್ರಮದಲ್ಲಿ ತಾವು ನೀಡಿದ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ ಎಂದು ಜೋಶಿ ಇಂದು ಸ್ಪಷ್ಟನೆ ನೀಡಿದ್ದಾರೆ.
ಜೋಶಿ ವಿರುದ್ಧ ವಾಗ್ದಾಳಿ ನಡೆಸಿದ ಉದ್ಧವ್ ಠಾಕ್ರೆ, "ಅವರು(ಕೆಲವು ಸಮಯದಿಂದ) ಕೇವಲ ಭಾರತ, ಪಾಕಿಸ್ತಾನ ವಿಷಯವನ್ನು ಮಾತ್ರ ಎತ್ತಿಲ್ಲ. ಆದರೆ ಅದು 'ಬಟೇಂಗೆ ತೋ ಕಟೇಂಗೆ'. ಇದು ಕೇವಲ ಮರಾಠಿ vs ಮರಾಠಿಯೇತರ ವಿಷಯವಲ್ಲ. ಮರಾಠರು vs ಮರಾಠಿಯೇತರರು ಮತ್ತು ರಾಜ್ಯವನ್ನು ವಶಪಡಿಸಿಕೊಳ್ಳುವುದು ಕೂಡ ಆಗಿದೆ" ಎಂದು ಹೇಳಿದರು.
ಗುಜರಾತ್, ತಮಿಳುನಾಡು, ಕರ್ನಾಟಕ, ಕೇರಳ, ಪಶ್ಚಿಮ ಬಂಗಾಳದಲ್ಲಿ ಇಂತಹ ಹೇಳಿಕೆಗಳನ್ನು ನೀಡಿ ನೀವು ಸುರಕ್ಷಿತವಾಗಿ ಮರಳುವಂತೆ ಉದ್ಧವ್ ಠಾಕ್ರೆ ಅವರು ಜೋಶಿಗೆ ಸವಾಲು ಹಾಕಿದ್ದಾರೆ.