ನವದೆಹಲಿ: ಅಕ್ರಮ ಬಾಂಗ್ಲಾದೇಶ ವಲಸಿಗರು ನೆಲೆಸಿರುವ ಪ್ರದೇಶದಲ್ಲಿ ವರದಿಗೆ ತೆರಳಿದ್ದ ಪತ್ರಕರ್ತವ ಮೇಲೆ ಬಾಂಗ್ಲಾದೇಶಿಯರು ದಾಳಿ ಮಾಡಿರುವ ವಿಡಿಯೊ ವ್ಯಾಪಕ ವೈರಲ್ ಆಗುತ್ತಿದೆ.
ಹೌದು.. ದೆಹಲಿ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ದೆಹಲಿಯಲ್ಲಿ ಅಕ್ರಮ ಬಾಂಗ್ಲಾ ವಲಸಿಗರ ಪ್ರದೇಶಗಳನ್ನು ಖಾಲಿ ಮಾಡಿಸುವ ಕುರಿತು ವ್ಯಾಪಕ ಸುದ್ದಿಗಳು ಹರಿದಾಡುತ್ತಿದ್ದು, ಇದಕ್ಕೆ ಇಂಬು ನೀಡುವಂತೆ ದೆಹಲಿ ಸಿಎಂ ರೇಖಾ ಗುಪ್ತಾ ಅವರು ಪ್ರಮಾಣ ವಚನ ಸ್ವೀಕರಿಸಿದ ಬೆನ್ನಲ್ಲೇ ದೆಹಲಿಯಲ್ಲಿರುವ ಅಕ್ರಮ ರೊಹಿಂಗ್ಯನ್ನರು ಮತ್ತು ಅಕ್ರಮ ಬಾಂಗ್ಲಾ ವಲಸಿಗರನ್ನು ಗಡಿಪಾರು ಮಾಡುವ ಮಾತನಾಡಿದ್ದರು.
ಈ ಬೆಳವಣಿಗೆ ಬೆನ್ನಲ್ಲೇ ಇಡೀ ರಾಜ್ಯದ ಗಮನ ದೆಹಲಿಯಲ್ಲಿ ಅಕ್ರಮ ಬಾಂಗ್ಲಾ ವಲಸಿಗರು ನೆಲೆಸಿರುವ ವಿವಿಧ ಪ್ರದೇಶಗಳತ್ತ ನೆಟ್ಟಿದ್ದು ಇದೀಗ ಇಂತಹುದೇ ಒಂದು ಪ್ರದೇಶವಾಗಿರುವ ಕಳಿಂದಿ ಕುಂಜ್ ನಲ್ಲಿ ವರದಿಗೆ ತೆರಳಿದ್ದ ಪತ್ರಕರ್ತನನ್ನೇ ಅಕ್ರಮ ಬಾಂಗ್ಲಾ ವಲಸಿಗರು ಥಳಿಸಿರುವ ಕುರಿತು ವರದಿಯಾಗಿದೆ. ಕಳಿಂದ್ ಕುಂಜ್ ನಲ್ಲಿ ದೆಹಲಿಯ ನೂತನ ಸರ್ಕಾರದ ಕ್ರಮದ ಕುರಿತು ಪತ್ರಕರ್ತ ಪ್ರಶ್ನೆಗಳನ್ನು ಕೇಳುತ್ತಿದ್ದು, ಈ ವೇಳೆ ಇಲ್ಲಿನ ಕೆಲ ಮುಸ್ಲಿಮರು ವಲಸಿಗರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇವರಿಗೆ ಸರಿಯಾದ ದಾಖಲೆಗಳೇ ಇಲ್ಲ.. ಇವರು ಇಲ್ಲಿ ಬಂದು ನೆಲೆಸಿರುವುದರಿಂದ ಸ್ಥಳೀಯರೇ ಆದ ನಮ್ಮನ್ನೂ ಕೂಡ ಸರ್ಕಾರ ಶಂಕೆಯಿಂದ ನೋಡುತ್ತಿದೆ. ಮೊದಲು ಇವರನ್ನು ಇಲ್ಲಿಂದ ಓಡಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವೇಳೆ ಆ ವ್ಯಕ್ತಿ ಹೌದು... ನಾನು ಬಾಂಗ್ಲಾದೇಶ ಪ್ರಜೆಯೇ.. ಏನೀಗ.. ನೀನು ಯಾರನ್ನು ಕರೆಯುತ್ತೀಯೋ ಕರಿ.. ಯಾರು ಬಂದು ನಮ್ಮನ್ನು ಇಲ್ಲಿಂದ ಓಡಿಸುತ್ತಾರೋ ನಾವು ನೋಡುತ್ತೇವೆ ಎಂದು ಸವಾಲೆಸೆಯುತ್ತಾನೆ.
ಈ ವೇಳೆ ಪತ್ರಕರ್ತ ಅಲ್ಲಿನ ಕೆಲ ಮಹಿಳೆಯರನ್ನು ಮಾತನಾಡಿಸಲು ಮುಂದಾದಾಗ ಅಲ್ಲಿನ ಮಹಿಳೆಯರು ನಾವು ಚಿಕ್ಕವಯಸ್ಸಿನಿಂದಲೂ ಇಲ್ಲಿಯೇ ಇದ್ದೇವೆ. ಟಿವಿಯಲ್ಲಿ ನಮ್ಮನ್ನು ತೋರಿಸಬೇಡಿ.. ಎಂದು ಗದರಿದ್ದಾರೆ. ಈ ವೇಳೆ ಪತ್ರಕರ್ತ ಇದೇನು ಪಾಕಿಸ್ತಾನ ಅಲ್ಲ.. ನಾವು ಎಲ್ಲಿ ಬೇಕಾದರೂ ವರದಿ ಮಾಡಬಹುದು ಎಂದಾಗ ಆಕೆ ಹೌದು.. ಇದು ಪಾಕಿಸ್ತಾನವೇ.. ಮೊದಲು ಕ್ಯಾಮೆರಾ ಆಫ್ ಮಾಡು ಎಂದು ಕ್ಯಾಮೆರಾ ಕಸಿಯಲು ಮುಂದಾಗುತ್ತಾರೆ. ಈ ವೇಳೆ ಪತ್ರಕರ್ತ ಇಲ್ಲಿ ಪ್ರಜಾಪ್ರಭುತ್ವ ಇಲ್ಲವೇ..ಏನಾಗುತ್ತಿದೆ ಎಂದು ಪ್ರಶ್ನೆ ಮಾಡುತ್ತಲೆ ಕೆಲ ಮಹಿಳೆಯರು ಮತ್ತು ಪುರುಷರು ಪತ್ರಕರ್ತನ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.
ಅಂದಹಾಗೆ, ವರದಿಗಳ ಪ್ರಕಾರ ದೆಹಲಿಯ ಕಾಳಿಂದಿ ಕುಂಜ್‌ನಲ್ಲಿ ಗಮನಾರ್ಹ ಸಂಖ್ಯೆಯ ರೋಹಿಂಗ್ಯಾಗಳು ಮತ್ತು ಬಾಂಗ್ಲಾದೇಶಿ ನಿರಾಶ್ರಿತರು ನೆಲೆಸಿದ್ದಾರೆ. ಈ ವರ್ಷದ ಜನವರಿಯಲ್ಲಿ, ಸುಪ್ರೀಂ ಕೋರ್ಟ್ ಒಂದು ಎನ್‌ಜಿಒಗೆ ದೆಹಲಿಯಲ್ಲಿ ರೋಹಿಂಗ್ಯಾ ವಸಾಹತು ಸ್ಥಳಗಳು ಮತ್ತು ಅವರಿಗೆ ಪ್ರವೇಶಿಸಬಹುದಾದ ಸೌಲಭ್ಯಗಳನ್ನು ತಿಳಿಸಲು ಕೇಳಿತ್ತು. ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಎನ್ ಕೋಟೀಶ್ವರ್ ಸಿಂಗ್ ಅವರ ಪೀಠವು, ರೋಹಿಂಗ್ಯಾ ಮಾನವ ಹಕ್ಕುಗಳ ಉಪಕ್ರಮದ ಎನ್‌ಜಿಒ ಪರವಾಗಿ ಹಾಜರಾದ ಹಿರಿಯ ವಕೀಲ ಕಾಲಿನ್ ಗೊನ್ಸಾಲ್ವೆಸ್ ಅವರನ್ನು ದೆಹಲಿಯಲ್ಲಿ ಅಕ್ರಮ ಬಾಂಗ್ಲಾ ನಿರಾಶ್ರಿತಕ ಸ್ಥಳಗಳನ್ನು ಸೂಚಿಸುವ ಅಫಿಡವಿಟ್ ಸಲ್ಲಿಸುವಂತೆ ಕೇಳಿತ್ತು.
ಇದಕ್ಕೆ ಉತ್ತರಿಸಿದ್ದ ಗೊನ್ಸಾಲ್ವೆಸ್, ತಮ್ಮ ಸಂಸ್ಥೆ ರೋಹಿಂಗ್ಯಾ ನಿರಾಶ್ರಿತರಿಗೆ ಸಾರ್ವಜನಿಕ ಶಾಲೆಗಳು ಮತ್ತು ಆಸ್ಪತ್ರೆಗಳಿಗೆ ಪ್ರವೇಶದ ಕುರಿತು ವಿಚಾರಿಸಲಾಗಿ ಆಧಾರ್ ಕಾರ್ಡ್‌ಗಳ ಕೊರತೆಯಿಂದಾಗಿ ಅವರಿಗೆ ಅದನ್ನು ನಿರಾಕರಿಸಲಾಗಿದೆ. ಅವರು ಯುಎನ್‌ಹೆಚ್‌ಸಿಆರ್ ಕಾರ್ಡ್‌ಗಳನ್ನು ಹೊಂದಿರುವ ನಿರಾಶ್ರಿತರು ಮತ್ತು ಆದ್ದರಿಂದ ಅವರು ಆಧಾರ್ ಕಾರ್ಡ್‌ಗಳನ್ನು ಹೊಂದಲು ಸಾಧ್ಯವಿಲ್ಲ. ಆದರೆ, ಆಧಾರ್ ಇಲ್ಲದ ಕಾರಣ ಅವರಿಗೆ ಸಾರ್ವಜನಿಕ ಶಾಲೆಗಳು ಮತ್ತು ಆಸ್ಪತ್ರೆಗಳಿಗೆ ಪ್ರವೇಶ ನೀಡಲಾಗುತ್ತಿಲ್ಲ" ಎಂದು ಅವರು ಹೇಳಿಕೆ ನೀಡಿದ್ದರು.