ಹರಿದ್ವಾರ: ಹರಿದ್ವಾರದ ಋಷಿಕುಲ್ ಆಯುರ್ವೇದಿಕ್ ಕಾಲೇಜಿನಲ್ಲಿ ಕೆಲವು ಮುಸ್ಲಿಂ ವಿದ್ಯಾರ್ಥಿಗಳು ಆಯೋಜಿಸಿದ ಇಫ್ತಾರ್ ಕೂಟಕ್ಕೆ ಹೊರಗಿನ ವಿದ್ಯಾರ್ಥಿಗಳನ್ನು ಕರೆಸಲಾಗಿದೆ ಎಂದು ಆರೋಪಿಸಿ ಬಲಪಂಥೀಯ ಬಜರಂಗ ದಳ ಕಾರ್ಯಕರ್ತರು ಶನಿವಾರ ಸಂಜೆ ಮುತ್ತಿಗೆ ಹಾಕಿದರು. ತಕ್ಷಣ ಆಗಮಿಸಿದ ಪೊಲೀಸರು ಹೆಚ್ಚಿನ ಗಲಾಟೆಯಾಗದಂತೆ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ.
ಮೂರು ದಿನಗಳಲ್ಲಿ ಈ ವಿಷಯದಲ್ಲಿ ಯಾವುದೇ ಕ್ರಮ ತೆಗೆದುಕೊಳ್ಳದಿದ್ದರೆ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಕಾಲೇಜು ಕ್ಯಾಂಪಸ್‌ಗೆ ಹೊರಗಿನವರನ್ನು ಕರೆತರುವ ಷಡ್ಯಂತ್ರದ ಭಾಗವಾಗಿ ಇಫ್ತಾರ್ ಕೂಟ ಆಯೋಜಿಸಲಾಗಿದೆ ಎಂದು ಬಜರಂಗದಳದ ಪದಾಧಿಕಾರಿ ಅಮಿತ್ ಕುಮಾರ್ ಆರೋಪಿಸಿದ್ದಾರೆ.
ಋಷಿಕುಲ ಆಯುರ್ವೇದಿಕ್ ಕಾಲೇಜಿಗೆ ಐತಿಹಾಸಿಕ ಮಹತ್ವವಿದೆ. ಪಂಡಿತ್ ಮಹಾಮಾನ ಮದನ್ ಮೋಹನ್ ಮಾಳವೀಯ ಅವರು ಸ್ಥಾಪಿಸಿದ ಋಷಿಕುಲ ವಿದ್ಯಾಪೀಠದಡಿ ಈ ವೈದ್ಯಕೀಯ ಕಾಲೇಜು ಸ್ಥಾಪಿಸಲಾಗಿದೆ. ದೇಶಾದ್ಯಂತ ವಿದ್ಯಾರ್ಥಿಗಳು ವೈದ್ಯಕೀಯ ಶಿಕ್ಷಣ ಪಡೆಯಲು ಇಲ್ಲಿಗೆ ಬರುತ್ತಾರೆ" ಎಂದು ಬಜರಂಗದಳದ ಪದಾಧಿಕಾರಿ ಹೇಳಿದರು.
ಹರಿದ್ವಾರ ಪ್ರದೇಶದಲ್ಲಿ ಹಿಂದೂಯೇತರರು ಇಂತಹ ಯಾವುದೇ ಕಾರ್ಯಕ್ರಮವನ್ನು ಆಯೋಜಿಸುವುದನ್ನು ಈಗಾಗಲೇ ಮುನ್ಸಿಪಲ್ ಕಾರ್ಪೊರೇಷನ್ ಬೈಲಾಗಳ ಅಡಿಯಲ್ಲಿ ನಿಷೇಧಿಸಲಾಗಿದೆ ಎಂದು ಅವರು ಹೇಳಿದ್ದಾರೆ. "ಇಸ್ಲಾಮಿಕ್ ಜಿಹಾದ್ ಗಳು ಧಾರ್ಮಿಕ ನಗರದಲ್ಲಿ ಪಿತೂರಿ ನಡೆಸುತ್ತಿದ್ದಾರೆ. ಮೂರು ದಿನಗಳಲ್ಲಿ ತಪ್ಪಿತಸ್ಥ ವಿದ್ಯಾರ್ಥಿಗಳನ್ನು ಕಾಲೇಜಿನಿಂದ ಹೊರಹಾಕಲು ಆಡಳಿತ ಮಂಡಳಿ ಕ್ರಮಕೈಗೊಳ್ಳದಿದ್ದರೆ, ಭಜರಂಗ ದಳ ಪ್ರತಿಭಟನೆ ತೀವ್ರಗೊಳಿಸುತ್ತದೆ ಎಂದು ಕುಮಾರ್ ಎಚ್ಚರಿಸಿದ್ದಾರೆ.