ನವದೆಹಲಿ: ಪರೀಕ್ಷಾ ಪ್ರಶ್ನೆ ಪತ್ರಿಕೆ ಸೋರಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಇದು "ವ್ಯವಸ್ಥಿತ ವೈಫಲ್ಯ" ಎಂದು ಗುರುವಾರ ಹೇಳಿದ್ದಾರೆ.
ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ರಾಹುಲ್ ಗಾಂಧಿ, ಎಲ್ಲಾ ರಾಜಕೀಯ ಪಕ್ಷಗಳು ಮತ್ತು ಸರ್ಕಾರಗಳು ತಮ್ಮ ಭಿನ್ನಾಭಿಪ್ರಾಯಗಳನ್ನು ಮರೆತು ಒಟ್ಟಾಗಿ ಕಠಿಣ ಕ್ರಮಗಳನ್ನು ತೆಗೆದುಕೊಂಡಾಗ ಮಾತ್ರ ಈ "ಗಂಭೀರ ಸಮಸ್ಯೆ" ಪರಿಹರಿಸಬಹುದು ಎಂದು ಪ್ರತಿಪಾದಿಸಿದರು.
ಪ್ರಶ್ನೆ ಪತ್ರಿಕೆ ಸೋರಿಕೆ ನಮ್ಮ ಯುವಕರಿಗೆ ಅತ್ಯಂತ ಅಪಾಯಕಾರಿ "ಚಕ್ರವ್ಯೂಹ" ವಾಗಿ ಮಾರ್ಪಟ್ಟಿರುವುದರಿಂದ ಆರು ರಾಜ್ಯಗಳ 85 ಲಕ್ಷ ಮಕ್ಕಳ ಭವಿಷ್ಯ ಅಪಾಯದಲ್ಲಿದೆ ಎಂದು ಮಾಜಿ ಕಾಂಗ್ರೆಸ್ ಅಧ್ಯಕ್ಷ ಹೇಳಿದ್ದಾರೆ.
"ಪ್ರಶ್ನೆ ಪತ್ರಿಕೆ ಸೋರಿಕೆಯು ಕಷ್ಟಪಟ್ಟು ಓದುವ ವಿದ್ಯಾರ್ಥಿಗಳು ಮತ್ತು ಅವರ ಕುಟುಂಬಗಳನ್ನು ಅನಿಶ್ಚಿತತೆ ಮತ್ತು ಒತ್ತಡಕ್ಕೆ ಸಿಲುಕಿಸುತ್ತಿದೆ. ಅವರ ಕಠಿಣ ಪರಿಶ್ರಮದ ಫಲವನ್ನು ಕಸಿದುಕೊಳ್ಳುತ್ತಿದೆ. ಇದು ಮುಂದಿನ ಪೀಳಿಗೆಗೆ ಅಪ್ರಾಮಾಣಿಕತೆಯು ಕಷ್ಟಪಡುವುದಕ್ಕಿಂತ ಉತ್ತಮ ಎಂಬ ತಪ್ಪು ಸಂದೇಶವನ್ನು ರವಾನಿಸುತ್ತದೆ. ಇದು ಸಂಪೂರ್ಣವಾಗಿ ಸ್ವೀಕಾರಾರ್ಹವಲ್ಲ" ಎಂದು ರಾಹುಲ್ ಗಾಂಧಿ X ನಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ.
"ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ದೇಶವನ್ನು ಬೆಚ್ಚಿಬೀಳಿಸಿ, ದೊಡ್ಡ ಸುದ್ದಿಯಾಗಿ ಒಂದು ವರ್ಷವೂ ಆಗಿಲ್ಲ. ನಮ್ಮ ಪ್ರತಿಭಟನೆಯ ನಂತರ, ಮೋದಿ ಸರ್ಕಾರವು ಹೊಸ ಕಾನೂನಿನ ಮೂಲಕ ಅಭ್ಯರ್ಥಿಗಳನ್ನು ಸಮಾಧಾನಪಡಿಸಿತು. ಆದರೆ ಇತ್ತೀಚಿನ ಹಲವು ಪ್ರಶ್ನೆ ಪತ್ರಿಕೆ ಸೋರಿಕೆ ನೋಡಿದರೆ ಆ ಕಾನೂನು ಸಹ ವೈಫಲ್ಯವಾಗಿದೆ ಎಂದು ಸಾಬೀತುಪಡಿಸುತ್ತದೆ" ಎಂದು ಹೇಳಿದ್ದಾರೆ.
ಈ ಗಂಭೀರ ಸಮಸ್ಯೆಯು ಸರ್ಕಾರದ ವ್ಯವಸ್ಥಿತ ವೈಫಲ್ಯ ಎಂದು ರಾಹುಲ್ ಗಾಂಧಿ ಪ್ರತಿಪಾದಿಸಿದ್ದಾರೆ.