ಮುಂಬೈ: ವಾರಕ್ಕೆ 70 ಗಂಟೆ ಕೆಲಸ ಮಾಡಬೇಕೆಂದು ಹೇಳಿದ್ದ ಇನ್ಫೋಸಿಸ್ ಸಂಸ್ಥೆಯ ಸಹ ಸಂಸ್ಥಾಪಕ ನಾರಾಯಣಮೂರ್ತಿ ಈಗ ಉದ್ಯೋಗಿಗಳ ಯೋಗಕ್ಷೇಮದ ಬಗ್ಗೆ ಮಾತನಾಡಿ ಸುದ್ದಿಯಲ್ಲಿದ್ದಾರೆ.
ಈಗ ಕಂಪನಿಗಳಿಗೆ ಸಲಹೆ ನೀಡಿರುವ ನಾರಾಯಣಮೂರ್ತಿ, ಕಂಪನಿಗಳು ತಮ್ಮ ಉದ್ಯೋಗಿಗಳನ್ನು ಮಾನವೀಯತೆಯಿಂದ ನಡೆಸಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ. ಮಾತ್ರವಲ್ಲದೆ, ಸಂಸ್ಥೆಯಲ್ಲಿರುವ ವೇತನದ ಅಂತರವನ್ನೂ ಕಡಿಮೆ ಮಾಡಿ ಎಂದು ಹೇಳಿದ್ದಾರೆ.
TiE Con Mumbai 2025 ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರತಿಯೊಬ್ಬ ಕಾರ್ಪೊರೇಟ್ ಉದ್ಯೋಗಿಯ ಗೌರವ ಮತ್ತು ಘನತೆಯನ್ನು ಎತ್ತಿಹಿಡಿಯಬೇಕು ಎಂದು ನಾರಾಯಣಮೂರ್ತಿ ಹೇಳಿದ್ದಾರೆ.
ನಿಮ್ಮ ಉದ್ಯೋಗಿಗಳನ್ನು ಹೊಗಳುವಾಗ ಸಾರ್ವಜನಿಕವಾಗಿಯೇ ಹೊಗಳಿ. ಅದೇ ರೀತಿ, ಟೀಕಿಸುವ ಸಂದರ್ಭ ಬಂದಾಗ ಟೀಕೆಗಳು ಖಾಸಗಿಯಾಗಿರಲಿ. ಸಂಸ್ಥೆಯ ಲಾಭವನ್ನು ಆದಷ್ಟು ನ್ಯಾಯಯುತವಾಗಿ ಉದ್ಯೋಗಿಗಳಿಗೆ ಹಂಚಿಕೆ ಮಾಡಿ' ಎಂದು ಮೂರ್ತಿ ಹೇಳಿದ್ದಾರೆ.
ಬಡತನ ನಿರ್ಮೂಲನೆಗೆ ಪರಿಹಾರ
ಭಾರತದ ಭವಿಷ್ಯದ ಅಭಿವೃದ್ಧಿ ಮತ್ತು ಬಡತನ ನಿರ್ಮೂಲನೆಯು ಸಹಾನುಭೂತಿಯಿಂದ ಬಂಡವಾಳಶಾಹಿಯನ್ನು ಸ್ವೀಕರಿಸುವ ವ್ಯವಹಾರಗಳ ಮೇಲೆ ಅವಲಂಬಿತವಾಗಿದೆ ಎಂದು ನಂಬುವುದಾಗಿ ನಾರಾಯಣಮೂರ್ತಿ ಹೇಳಿದ್ದಾರೆ.
"ಬಂಡವಾಳಶಾಹಿ ಎಂದರೆ ಜನರು ತಮಗಾಗಿ ಮತ್ತು ತಮ್ಮ ಹೂಡಿಕೆದಾರರಿಗೆ ಸಂಪತ್ತನ್ನು ಸೃಷ್ಟಿಸಲು, ಜನರಿಗೆ ಉದ್ಯೋಗಗಳನ್ನು ಸೃಷ್ಟಿಸಲು ಮತ್ತು ಆ ಮೂಲಕ ಬಡತನವನ್ನು ಕಡಿಮೆ ಮಾಡಲು ಮತ್ತು ಸಾರ್ವಜನಿಕ ಒಳ್ಳೆಯ ಕೆಲಸಗಳು ನಡೆಯಲು ತೆರಿಗೆಗಳಿಗೆ ಕೊಡುಗೆ ನೀಡಲು ಹೊಸ ಆಲೋಚನೆಗಳೊಂದಿಗೆ ಹೊರಬರಲು ಅವಕಾಶಗಳನ್ನು ಒದಗಿಸುವುದು" ಎಂದು ನಾರಾಯಣ ಮೂರ್ತಿ ವಿವರಿಸಿದರು.