ನವದೆಹಲಿ: ಹನಿಟ್ರ್ಯಾಪ್ ಪ್ರಕರಣ ದೇಶದಾದ್ಯಂತ ಕರ್ನಾಟಕದ ಪ್ರತಿಷ್ಠೆಗೆ ತೀವ್ರ ಧಕ್ಕೆ ತಂದಿದ್ದು, ರಾಜ್ಯದಲ್ಲಿ ಈಗ "ಕ್ರಿಮಿನಲ್ ಕ್ಯಾಬಿನೆಟ್" ಇದೆ ಎಂದು ಆರೋಪಿಸಿರುವ ಬಿಜೆಪಿ ಸಂಸದ ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ ಸಿದ್ದರಾಮಯ್ಯ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಶುಕ್ರವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಬೊಮ್ಮಾಯಿ, ಕಾಂಗ್ರೆಸ್ ಸರ್ಕಾರ ಅಧಿಕಾರದ ದುರಾಸೆಯಿಂದ ರಾಜ್ಯವನ್ನು ನೈತಿಕ ಅವನತಿಗೆ ಕೊಂಡೊಯ್ಯುತ್ತಿದೆ. ಕೇವಲ ಎರಡು ವರ್ಷಗಳ ಕಾಂಗ್ರೆಸ್ ಆಡಳಿತದಲ್ಲಿ ಸುಮಾರು ಹತ್ತು ಹಗರಣಗಳು ಹೊರಬಿದ್ದಿವೆ ಎಂದು ಕಿಡಿಕಾರಿದರು.
ಎಲ್ಲಿ ನೋಡಿದರೂ ಹಗರಣಗಳ ಸರಮಾಲೆಯೇ ಕಂಡುಬರುತ್ತಿದೆ. ವಿಧಾನಸೌಧವೂ ಇದಕ್ಕೆ ಸಾಕ್ಷಿಯಾಗಿದೆ. ಇಲ್ಲಿಯವರೆಗೆ ರಾಜ್ಯವು ಆರ್ಥಿಕ ಬಿಕ್ಕಟ್ಟಿನಿಂದ ಹೋರಾಡುತ್ತಿತ್ತು ಮತ್ತು ಈಗ 'ಹನಿ ಬಿಕ್ಕಟ್ಟು' ಪ್ರಾರಂಭವಾಗಿದೆ. ಈ ಸರ್ಕಾರ ಆರ್ಥಿಕವಾಗಿ ಮತ್ತು ನೈತಿಕವಾಗಿ ದಿವಾಳಿಯಾಗಿದೆ. ಹನಿಟ್ರ್ಯಾಪ್ ಮಾಡುವ ಪ್ರಯತ್ನ ನಡೆದಿದೆ ಎಂದು ಸ್ವತಃ ಸಂಪುಟದ ಸಚಿವರೊಬ್ಬರು ವಿಧಾನಸಭೆಯಲ್ಲಿ ಹೇಳಿಕೆ ನೀಡಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿ ಮೌನ ವಹಿಸಿದ್ದಾರೆ ಎಂದು ಟೀಕಾ ಪ್ರಹಾರ ನಡೆಸಿದರು.
ಸಚಿವ ಸಂಪುಟದಲ್ಲೇ ಇಂತಹ ಘಟನೆಗಳು ನಡೆದಾಗ ಈ ಸಚಿವ ಸಂಪುಟವನ್ನು ಏನೆಂದು ಕರೆಯಬೇಕು? ಎಂದು ಪ್ರಶ್ನಿಸಿದ ಅವರು, ಈ ಸರ್ಕಾರ ಎಲ್ಲಾ ನೈತಿಕತೆ ಕಳೆದುಕೊಂಡಿದ್ದು, ಕ್ರಿಮಿನಲ್ ಕ್ಯಾಬಿನೆಟ್ ಗಿಂತ ಕಡಿಮೆಯಿಲ್ಲ ಎಂದರು.
ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಇಂತಹ ಅನೈತಿಕ ಚಟುವಟಿಕೆಗಳು ನಡೆಯುತ್ತಿದ್ದು, ಸಿದ್ದರಾಮಯ್ಯ ಹೊಣೆ ಹೊತ್ತು ಸಿಎಂ ಸ್ಥಾನದಿಂದ ಕೆಳಗಿಳಿಯಬೇಕು.ಇಲ್ಲದಿದ್ದಲ್ಲಿ ಕರ್ನಾಟಕದ ಜನತೆ ಇಂತಹ ಆಡಳಿತವನ್ನು ಆಯ್ಕೆ ಮಾಡಿದ್ದಕ್ಕೆ ಪಶ್ಚಾತಾಪಪಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಇದೇ ವೇಳೆ, ಹನಿಟ್ರ್ಯಾಪ್ ಪ್ರಕರಣದಲ್ಲಿ ಭಾಗಿಯಾಗಿರುವ ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ದೃಢವಾಗಿ ಹೇಳಿದ್ದಾರೆ.