ಮುಂಬೈ: ಕಾಮಿಡಿಯನ್ ಕುನಾಲ್ ಕಾಮ್ರಾ ಟೀಕೆ ಕುರಿತು ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಇದೇ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದು, ವಿಡಂಬನೆ ಮಾಡುವಾಗ ಸಭ್ಯತೆ ಇರಬೇಕು, ಇಲ್ಲದಿದ್ದರೆ ಕ್ರಿಯೆಯು ಪ್ರತಿಕ್ರಿಯೆಗೆ ಕಾರಣವಾಗುತ್ತದೆ ಎಂದು ಮಂಗಳವಾರ ಹೇಳಿದ್ದಾರೆ,
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲರಿಗೂ ವಾಕ್ ಸ್ವಾತಂತ್ರ್ಯವಿದೆ. ಆದರೆ, ವಿಡಂಬನೆ ಮಾಡುವಾಗ ಮಿತಿ ಇರಬೇಕು. ಇಲ್ಲದಿದ್ದರೆ ಕ್ರಿಯೆಯು ಪ್ರತಿಕ್ರಿಯೆಗೆ ಕಾರಣವಾಗುತ್ತದೆ. ಯಾರು ಏನು ಹೇಳುತ್ತಾರೆಂಬುದರ ಬಗ್ಗೆ ನಾನು ಗಮನ ಕೊಡುವುದಿಲ್ಲ. ಎಲ್ಲದಕ್ಕೂ ನನ್ನ ಕೆಲಸ ಉತ್ತರ ಕೊಡುತ್ತದೆ. ನಾನು ಇದರ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ. ವಿಧ್ವಂಸಕತೆ, ದಾಳಿಯನ್ನೂ ಸಮರ್ಥಿಸುವುದಿಲ್ಲ ಎಂದು ಹೇಳಿದರು.
ಇದೇ ವ್ಯಕ್ತಿ ಈ ಹಿಂದೆ ಭಾರತದ ಸುಪ್ರೀಂ ಕೋರ್ಟ್, ಪ್ರಧಾನಿ, ಪತ್ರಕರ್ತ ಅರ್ನಬ್ ಗೋಸ್ವಾಮಿ ಮತ್ತು ಕೆಲವು ಕೈಗಾರಿಕೋದ್ಯಮಿಗಳ ಬಗ್ಗೆಯೂ ಟೀಕೆ ಮಾಡಿದ್ದರು. ಇದು ವಾಕ್ ಸ್ವಾತಂತ್ರ್ಯವಲ್ಲ; ಇದು ಯಾರಿಗೋ ಒಬ್ಬರ ಪರವಾಗಿ ಮಾಡುತ್ತಿರುವ ಕೆಲಸದಂತಿದೆ ಎಂದು ತಿಳಿಸಿದರು.
ನಾನು ಯಾರ ಆರೋಪಗಳಿಗೂ ಉತ್ತರಿಸುವುದಿಲ್ಲ. ನನ್ನ ಕೆಲಸವೇ ಅವುಗಳಿಗೆ ಉತ್ತರ ನೀಡಲಿದೆ. ಅಭಿವೃದ್ಧಿ ಮತ್ತು ಕಲ್ಯಾಣ ಯೋಜನೆಗಳಿಗೆ ಆದ್ಯತೆ ನೀಡುತ್ತೇನೆ. ಅಟಲ್ ಸೇತು, ಕೋಸ್ಟಲ್ ರಸ್ತೆ (ಮುಂಬೈನಲ್ಲಿ ಎರಡೂ) ಮತ್ತು ಮೆಟ್ರೋ ಯೋಜನೆಗಳಂತಹ ಎಲ್ಲಾ ಯೋಜನೆಗಳು ಹಠಾತ್ತನೆ ನಿಂತುಹೋಗಿದ್ದು, ಅಭಿವೃದ್ಧಿ ಮತ್ತು ಕಲ್ಯಾಣ ಯೋಜನೆಗಳಿಗೆ ಆದ್ಯತೆ ನೀಡಬೇಕಿದೆ. ಯೋಜನೆಗಳನ್ನು ಪುನರಾರಂಭಿಸಿದ್ದೇವೆಂದು ಹೇಳಿದರು.
ರಾಜ್ಯ ಸರ್ಕಾರವು ಹಲವು ನಿರ್ಧಾರಗಳನ್ನು ತೆಗೆದುಕೊಂಡಿದೆ ಮತ್ತು ಅಗತ್ಯವಾದ ಸರ್ಕಾರಿ ನಿರ್ಣಯಗಳನ್ನು (GRs) ಜಾರಿಗೆ ತಂದಿದೆ. ಆದ್ದರಿಂದ, ಯಾರು ಏನು ಹೇಳುತ್ತಾರೆ ಎಂಬುದರ ಮೇಲೆ ನಾನು ಗಮನಹರಿಸುವುದಿಲ್ಲ; ನನ್ನ ಕೆಲಸದ ಮೂಲಕ ನಾನು ಅವರಿಗೆ ಉತ್ತರಿಸುತ್ತೇನೆಂದು ಹೇಳಿದರು.
ಕುನಾಲ್ ಕಾಮ್ರಾ ಅವರು ಮುಂಬೈನ ಹ್ಯಾಬಿಟಾಟ್ ಕಾಮಿಡಿ ಕ್ಲಬ್‌ನಲ್ಲಿ ಕಾರ್ಯಕ್ರಮ ನೀಡುವಾಗ ಮಹಾರಾಷ್ಟ್ರದ ರಾಜಕೀಯ ವಿಭಜನೆಯ ಬಗ್ಗೆ ಮಾತನಾಡಿದ್ದರು.
ದಿಲ್ ತೋ ಪಾಗಲ್ ಹೈ ಹಾಡನ್ನು ಅಣಕಿಸುವ ರೀತಿಯಲ್ಲಿ ರಾಜಕೀಯ ಪಕ್ಷಗಳನ್ನು ವಿಲೀನಗೊಳಿಸಿ ಹಾಡಿದ್ದರು. ಆದರೆ, ಕಾಮ್ರಾ ಶಿಂಧೆ ಅವರ ಹೆಸರನ್ನು ಸ್ಪಷ್ಟವಾಗಿ ಎಲ್ಲೂ ಉಲ್ಲೇಖಿಸಿರಲಿಲ್ಲ.
ಏಕನಾಥ್ ಶಿಂಧೆ - ಉದ್ದವ್ ಠಾಕ್ರೆ ನಡುವಿನ ರಾಜಕೀಯ ಉಲ್ಲೇಖಿಸುತ್ತಾ ಮೊದಲು ಶಿವಸೇನಾ ಬಿಜೆಪಿಯಿಂದ ಹೊರಬಂದಿತು, ನಂತರ ಶಿವಸೇನಾ ಶಿವಸೇನಾದಿಂದಲೇ ಹೊರಬಂದಿತು. ಎನ್‌ಸಿಪಿಯಿಂದ ಎನ್‌ಸಿಪಿ ಹೊರಬಂದಿತು. ಇವರೆಲ್ಲಾ ಒಂದು ಮತದಾರನಿಗೆ 9 ಬಟನ್‌ಗಳನ್ನು ನೀಡಿದ್ದಾರೆ. ಥಾಣೆಯು ರಾಜಕೀಯ ಭದ್ರಕೋಟೆಯಾಗಿದ್ದು, ಗದ್ದಾರ್ (ದ್ರೋಹಿ) ಆಳ್ವಿಕೆ ಎಂದು ಪರೋಕ್ಷವಾಗಿ ಹಾಡು ಹೇಳುತ್ತಾ ಟೀಕಿಸಿದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಹಾಸ್ಯದ ವಿರುದ್ಧ ಶಿವಸೇನೆ ತೀವ್ರವಾಗಿ ಕಿಡಿಕಾರಿದ್ದು, ಕುನಾಲ್ ಅವರು ಕಾರ್ಯಕ್ರಮ ನೀಡಿದ್ದ ಸ್ಟುಡಿಯೋ ಮೇಲೆ ಕಾರ್ಯಕರ್ತರು ದಾಂಧಲೆ ನಡೆಸಿ. ಧ್ವಂಸ ಮಾಡಿದ್ದರು. ಈ ಘಟನೆ ಭಾರೀ ಚರ್ಚೆ ಹಾಗೂ ಸುದ್ದಿಗೆ ಗ್ರಾಸವಾಗಿದೆ.