ನವದೆಹಲಿ: ಹಿಂದೂಗಳ ಮೇಲಿನ ದಾಳಿಯ ಹಿನ್ನೆಲೆಯಲ್ಲಿ ನವದೆಹಲಿ ಮತ್ತು ಢಾಕಾ ನಡುವಿನ ರಾಜಕೀಯ ಸಂಬಂಧ ಹದಗೆಟ್ಟಿರುವ ನಡುವೆಯೂ, ಪ್ರಧಾನಿ ನರೇಂದ್ರ ಮೋದಿ ಅವರು ಬಾಂಗ್ಲಾದೇಶ ಮಧ್ಯಂತರ ಸರ್ಕಾರದ ಮುಖ್ಯ ಸಲಹೆಗಾರ ಮುಹಮ್ಮದ್ ಯೂನಸ್ ಅವರಿಗೆ ಪತ್ರ ಬರೆದಿದ್ದು, ದ್ವಿಪಕ್ಷೀಯ ಸಂಬಂಧವನ್ನು ಬಲಪಡಿಸುವ ಭಾರತದ ಬದ್ಧತೆಯನ್ನು ಪುನರುಚ್ಚರಿಸಿದ್ದಾರೆ ಮತ್ತು ಬಾಂಗ್ಲಾ ಸ್ವಾತಂತ್ರ್ಯ ದಿನದ ಶುಭಾಶಯ ಕೋರಿದ್ದಾರೆ.
“ಮಾನ್ಯರೇ, ನಿಮ್ಮ ರಾಷ್ಟ್ರೀಯ ದಿನಾಚರಣೆಯಂದು ನಿಮಗೆ ಮತ್ತು ಬಾಂಗ್ಲಾದೇಶದ ಜನರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ” ಎಂದು ಪ್ರಧಾನಿ ಪತ್ರ ಬರೆದಿದ್ದಾರೆ.
“ಈ ದಿನ, ರಾಷ್ಟ್ರೀಯ ದಿನಾಚರಣೆಯು ಉಭಯ ದೇಶಗಳ ದ್ವಿಪಕ್ಷೀಯ ಪಾಲುದಾರಿಕೆಗೆ ಅಡಿಪಾಯ ಎನಿಸಿದ ಪರಸ್ಪರ ಹಂಚಿಕೊಂಡಿರುವ ಇತಿಹಾಸ ಮತ್ತು ತ್ಯಾಗದ ಪ್ರತೀಕ. ಬಾಂಗ್ಲಾದೇಶ ವಿಮೋಚನಾ ಯುದ್ಧದ ಸ್ಫೂರ್ತಿ, ಹಲವು ಕ್ಷೇತ್ರಗಳಲ್ಲಿಸಮೃದ್ಧವಾಗಿ ಬೆಳೆದಿರುವ ಮತ್ತು ನಮ್ಮ ಜನತೆಗೆ ಲಾಭ ತರುವ ನಮ್ಮ ಸಂಬಂಧಕ್ಕೆ ಮಾರ್ಗದರ್ಶಿ ದೀಪವಾಗಿ ಮುಂದುವರಿಯಲಿದೆ" ಎಂದು ಮೋದಿ ಹೇಳಿದ್ದಾರೆ.
“ಶಾಂತಿ, ಸ್ಥಿರತೆ ಮತ್ತು ಸಮೃದ್ಧಿಗಾಗಿ ನಮ್ಮ ಸಾಮಾನ್ಯ ಆಕಾಂಕ್ಷೆಗಳಿಂದ ನಡೆಸಲ್ಪಡುವ ಮತ್ತು ಪರಸ್ಪರರ ಹಿತಾಸಕ್ತಿಗಳು ಮತ್ತು ಕಾಳಜಿಗಳಿಗೆ ಪರಸ್ಪರ ಗೌರವವನ್ನು ಆಧರಿಸಿದ ಈ ಪಾಲುದಾರಿಕೆಯನ್ನು ಮತ್ತಷ್ಟು ಹೆಚ್ಚಿಸಲು ನಾವು ಬದ್ಧರಾಗಿದ್ದೇವೆ” ಎಂದು ಪ್ರಧಾನಿ ತಿಳಿಸಿದ್ದಾರೆ.
ಥಾಯ್ಲೆಂಡ್ ನಲ್ಲಿ ನಡೆಯಲಿರುವ ಬಿಮ್‌ಸ್ಟೆಕ್ ಶೃಂಗ ಸಭೆಯಲ್ಲಿ ಪ್ರಥಮ ಬಾರಿಗೆ ಪರಸ್ಪರ ಭೇಟಿ ಮಾಡಲಿರುವ ಒಂದು ವಾರದ ಮೊದಲು ಈ ಬೆಳವಣಿಗೆ ನಡೆದಿದೆ. ಕಳೆದ ವರ್ಷ ಬಾಂಗ್ಲಾದೇಶದ ಮಾಜಿ ಪ್ರಧಾನಿ ಹಾಗೂ ಭಾರತದೊಂದಿಗೆ ಸ್ನೇಹಪರವಾಗಿದ್ದ ಶೇಖ್ ಹಸೀನಾ ಸರ್ಕಾರವನ್ನು ಪದಚ್ಯುತಿಗೊಳಿಸಿ, ಯೂನುಸ್ ಅವರು ಮಧ್ಯಂತರ ಸರ್ಕಾರದ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.
ಹಿಂದೂ ಅಲ್ಪಸಂಖ್ಯಾತರ ಮೇಲಿನ ದಾಳಿಗಳಿಗೆ ಸಂಬಂಧಿಸಿದ ವರದಿಗಳ ಹಿನ್ನೆಲೆಯಲ್ಲಿ, ಭಾರತವು ಬಾಂಗ್ಲಾದೇಶಕ್ಕೆ ತನ್ನ ಕಳವಳಗಳನ್ನು ವ್ಯಕ್ತಪಡಿಸುತ್ತಲೇ ಇದೆ. ದಾಳಿಗಳು ಕೋಮುವಾದಕ್ಕಿಂತ ರಾಜಕೀಯ ಪ್ರೇರಿತವಾಗಿವೆ ಎಂದು ಢಾಕಾ ಪ್ರತಿಕ್ರಿಯಿಸಿದೆ.