ಜೈಪುರ: ರಾಜಸ್ಥಾನದ ಸಿಕಾರ್‌ನಲ್ಲಿ ವ್ಯಕ್ತಿಯೊಬ್ಬ ಗಂಡು ಮಗು ಬೇಕೆಂದು ತನ್ನ ಐದು ತಿಂಗಳ ಅವಳಿ ಹೆಣ್ಣು ಮಕ್ಕಳನ್ನು ನೆಲಕ್ಕೆ ಅಪ್ಪಳಿಸಿ ಕೊಂದಿದ್ದಾನೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
ಗುರುವಾರ ನೀಮ್ ಕಾ ಥಾನಾ ನಗರದಲ್ಲಿ ಮನೆಯಿಂದ ಸುಮಾರು 2 ಕಿ.ಮೀ ದೂರದಲ್ಲಿರುವ ಖಾಲಿ ಜಾಗದಲ್ಲಿ ಶವಗಳನ್ನು ಹೂತು ಹಾಕಿದ್ದಾನೆ ಎಂದು ಆರೋಪಿಸಿದ್ದು, ಪೊಲೀಸರು ಶವಗಳನ್ನು ಹೊರತೆಗೆದು, ಆರೋಪಿ ತಂದೆಯನ್ನು ಬಂಧಿಸಿದ್ದಾರೆ.
ಅಶೋಕ್ ಯಾದವ್ ಗಂಡು ಮಗುವನ್ನು ಬಯಸಿದ್ದನು. ಇದೇ ವಿಚಾರವಾಗಿ ಗುರುವಾರ ರಾತ್ರಿ ಪತ್ನಿ ಅನಿತಾ ಜೊತೆ ಜಗಳವಾಡಿದ್ದನು. ದಂಪತಿಗೆ ಐದು ವರ್ಷದ ಇನ್ನೊಂದು ಹೆಣ್ಣು ಮಗು ಇದೆ ಎಂದು ಪೊಲೀಸರು ತಿಳಿಸಿದ್ದಾರೆ.
'ಮೃತ ಹೆಣ್ಣು ಮಕ್ಕಳ ಚಿಕ್ಕಪ್ಪ ಸುನಿಲ್ ಯಾದವ್, ಕೊತ್ವಾಲಿ ಪೊಲೀಸ್ ಠಾಣೆಗೆ ಕರೆ ಮಾಡಿದ್ದಾರೆ. ಹೆಣ್ಣು ಮಕ್ಕಳ ತಂದೆ ಅವರನ್ನು ಕೊಂದು ಕಲೆಕ್ಟರೇಟ್ ಬಳಿಯ ಜಮೀನಿನಲ್ಲಿ ಶವಗಳನ್ನು ಹೂತು ಹಾಕಿದ್ದಾನೆ ಎಂದು ಹೇಳಿದ್ದಾರೆ' ಎಂದು ಹೆಚ್ಚುವರಿ ಎಸ್ಪಿ ರೋಷನ್ ಮೀನಾ ಹೇಳಿದರು.
ಘಟನೆ ಬಗ್ಗೆ ಮಾಹಿತಿ ಪಡೆದ ಎಸ್‌ಡಿಎಂ ರಾಜವೀರ್ ಯಾದವ್ ಮತ್ತು ವಿಧಿವಿಜ್ಞಾನ ವಿಜ್ಞಾನ ಪ್ರಯೋಗಾಲಯ (ಎಫ್‌ಎಸ್‌ಎಲ್) ತಂಡವು ತಡರಾತ್ರಿ ಸ್ಥಳಕ್ಕೆ ತಲುಪಿದೆ. ಶುಕ್ರವಾರ ಬೆಳಿಗ್ಗೆ, ಶವಗಳನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದೆ ಎಂದು ಅವರು ಹೇಳಿದರು.
ಅವಳಿ ಮಕ್ಕಳು ನವೆಂಬರ್ 4, 2024 ರಂದು ಜನಿಸಿದರು. ಅಂದಿನಿಂದ ಮನೆಯಲ್ಲಿ ಜಗಳ ನಡೆಯುತ್ತಿತ್ತು. ಅಶೋಕ್ ಮತ್ತು ಅವರ ಕುಟುಂಬ ಸದಸ್ಯರು ಗಂಡು ಮಗುವನ್ನು ಬಯಸುತ್ತಿದ್ದರು. ಮೊದಲು ಆತ ತಮ್ಮ ಹೆಂಡತಿಯನ್ನು ಹೊಡೆದಿದ್ದಾನೆ. ನಂತರ ಇಬ್ಬರೂ ಹೆಣ್ಣು ಮಕ್ಕಳನ್ನು ಎತ್ತಿಕೊಂಡು ಕ್ರೂರವಾಗಿ ನೆಲದ ಮೇಲೆ ಎಸೆದಿದ್ದಾನೆ ಎಂದು ಸಬ್-ಇನ್ಸ್‌ಪೆಕ್ಟರ್ ವೀರೇಂದ್ರ ಕುಮಾರ್ ಹೇಳಿದರು.
ಗಾಯಗೊಂಡ ಹಸುಳೆಗಳನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ, ಆ ವೇಳೆಗಾಗಲೇ ಅವರಿಬ್ಬರು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ನಂತರ, ಪತಿ ಮತ್ತು ಅವರ ಕುಟುಂಬಸ್ಥರು ಮಕ್ಕಳನ್ನು ಮುಚ್ಚಿದ್ದಾರೆ. ಸಮಾಧಿ ಸ್ಥಳದ ಮೇಲೆ ಕಲ್ಲುಗಳು ಮತ್ತು ಗಿಡಗಳ ಪೊದೆಗಳನ್ನು ಇರಿಸಲಾಗಿತ್ತು ಎಂದು ಅವರು ಹೇಳಿದರು.