ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಮೇ 18ರಂದು ಶಬರಿಮಲೆಗೆ ಭೇಟಿ ನೀಡಲಿದ್ದಾರೆ. ರಾಷ್ಟ್ರಪತಿಯೊಬ್ಬರು ಶಬರಿಮಲೆಗೆ ಹೋಗುತ್ತಿರುವುದು ಇದೇ ಮೊದಲು.
ಪಂಪಾದಿಂದ ಇರುಮುಡಿ ಹೊತ್ತುಕೊಂಡು ಕಾಲ್ನಡಿಗೆಯಲ್ಲಿ ಬೆಟ್ಟವನ್ನು ಏರುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಇಂದಿರಾ ಗಾಂಧಿ ಅವರು ಪ್ರಧಾನಿಯಾಗಿದ್ದಾಗ ಶಬರಿಮಲೆ ಏರುವ ಬಯಕೆ ವ್ಯಕ್ತಪಡಿಸಿದ್ದರು. ಭದ್ರತಾ ಇಲಾಖೆಯು ಅವರು ನೇರವಾಗಿ ಇಳಿಯಲು ಸನ್ನಿಧಾನದಲ್ಲಿ ಹೆಲಿಪ್ಯಾಡ್ ನಿರ್ಮಿಸಲು ಯೋಜಿಸಿತ್ತು ಆದರೆ ವಿರೋಧದಿಂದಾಗಿ ಆ ಆಲೋಚನೆಯನ್ನು ಹಿಂತೆಗೆದುಕೊಳ್ಳಲಾಗಿತ್ತು.
ಈ ಕುರಿತು ತಿರುವಾಂಕೂರು ದೇವಸ್ವಂ ಮಂಡಳಿಗೆ ರಾಷ್ಟ್ರಪತಿ ಭವನದಿಂದ ಅಧಿಸೂಚನೆ ಬಂದಿದೆ. ವೇಳಾಪಟ್ಟಿಯನ್ನೂ ನೀಡಲಾಗಿದೆ. ಅದರ ಪ್ರಕಾರ ದ್ರೌಪದಿ ಮುರ್ಮು ಅವರು ಮೇ 18 ರಂದು ಪಾಲಾದ ಸೇಂಟ್ ಥಾಮಸ್ ಕಾಲೇಜಿನ ಜಯಂತಿ ಸಮ್ಮೇಳನದಲ್ಲಿ ಪಾಲ್ಗೊಳ್ಳಲಿದ್ದಾರೆ. ಬಳಿಕ ಮೇ 19 ರಂದು ಪಂಪಾಗೆ ಪ್ರಯಾಣ ಬೆಳೆಸಲಿದ್ದಾರೆ.
ದೇವಾಲಯದ ಬಳಿಯಿರುವ ನೀಲಕ್ಕಲ್ ಹೆಲಿಪ್ಯಾಡ್‌ಗೆ ಪ್ರಯಾಣಿಸಿ ಪಂಪಾ ಬೇಸ್ ಕ್ಯಾಂಪ್‌ಗೆ ತೆರಳುತ್ತಾರೆ. ಯಾತ್ರಿಕರಂತೆ 4.25 ಕಿಮೀ ಎತ್ತರದ ಹಾದಿಯಲ್ಲಿ ನಡೆಯುತ್ತಾರೆ. ವಿಶೇಷ ರಕ್ಷಣಾ ಗುಂಪು (ಎಸ್‌ಪಿಜಿ) ಭದ್ರತೆಯಲ್ಲಿ ಕಡಿದಾದ ರಸ್ತೆಯಲ್ಲಿ ತೆರಳಲಿದ್ದಾರೆ. ಇನ್ನು ಪ್ರವಾಸ ಸಂದರ್ಭದಲ್ಲಿ ಮುರ್ಮು ಅವರು ಕೊಟ್ಟಾಯಂ ಮತ್ತು ಕುಮಾರಕೋಮ್ನಲ್ಲಿ ಉಳಿದುಕೊಳ್ಳುವ ನಿರೀಕ್ಷೆಯಿದೆ. ಭದ್ರತೆ ಮತ್ತು ವಸತಿಗಾಗಿ ಅಗತ್ಯವಿರುವ ಎಲ್ಲಾ ವ್ಯವಸ್ಥೆಗಳನ್ನು ಮಾಡುವಂತೆ ಕೇರಳ ಸರ್ಕಾರಕ್ಕೆ ನಿರ್ದೇಶನ ನೀಡಲಾಗಿದೆ.