ಉಧಂಪುರ: ಕದನ ವಿರಾಮಕ್ಕೆ ಒಪ್ಪಿಗೆ ನೀಡಿದ ಕೆಲವೇ ಗಂಟೆಗಳಲ್ಲಿ ಪಾಕಿಸ್ತಾನ ಮತ್ತೊಮ್ಮೆ ಭಾರತಕ್ಕೆ ದ್ರೋಹ ಬಗೆದು ಕದನ ವಿರಾಮವನ್ನು ಉಲ್ಲಂಘಿಸಿದೆ. ಜಮ್ಮು ಮತ್ತು ಕಾಶ್ಮೀರದ ಅಖ್ನೂರ್‌ನಲ್ಲಿ ಡ್ರೋನ್ ಗಳು ಕಾಣಿಸಿದ ನಂತರ ರಾಜಸ್ಥಾನದ ಜೈಸಲ್ಮೇರ್, ಬಾರ್ಮರ್, ಗುಜರಾತಿನ ಕಚ್ ಮತ್ತಿತರ ಅನೇಕ ಗಡಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಡ್ರೋನ್ ಹಾರಾಟದ ದೃಶ್ಯಗಳು ಕಂಡುಬಂದವು.
ಉದ್ಧಂಪುರದಲ್ಲಿಯೂ ಡ್ರೋನ್ ಕಾಣಿಸಿಕೊಂಡಿದ್ದು, ಶ್ರೀನಗರದಲ್ಲಿ ಸ್ಫೋಟದ ಶಬ್ಧ ಕೇಳಿಬಂದಿತ್ತು. ಆದರೆ, ಶ್ರೀನಗರದಲ್ಲಿ ಯಾವುದೇ ಸ್ಫೋಟಗಳು ನಡೆದಿಲ್ಲ. ನಿಯಂತ್ರಣ ರೇಖೆಯ ಉದ್ದಕ್ಕೂ ಯಾವುದೇ ಗುಂಡಿನ ದಾಳಿ ನಡೆದಿಲ್ಲ ಎಂದು ಭಾರತೀಯ ಸೇನೆ ಖಚಿತಪಡಿಸಿದೆ.
ಡ್ರೋನ್‌ಗಳನ್ನು ಗುರುತಿಸಲಾಗಿದೆ. ಸ್ವಲ್ಪ ಸಮಯದ ನಂತರ ಅವುಗಳ ಸ್ಥಿತಿಯನ್ನು ಖಚಿತಪಡಿಸಲಾಗುವುದು ಎಂದು ಭಾರತೀಯ ಸೇನೆ ಹೇಳಿಕೆಯಲ್ಲಿ ತಿಳಿಸಿದೆ.
ಪಾಕ್ ಡ್ರೋನ್‌ಗಳು ಭಾರತದ ವಾಯುಪ್ರದೇಶ ಉಲ್ಲಂಘನೆ ಮುಂದುವರೆಸಿದ ನಂತರ ರಾಜಸ್ಥಾನದ ಹಲವಾರು ಭಾಗಗಳಲ್ಲಿ ಸಂಪೂರ್ಣ ಬ್ಲಾಕ್ ಔಟ್ ಘೋಷಿಸಲಾಗಿದೆ. ಪಂಜಾಬಿನ ಚಂಡೀಘಡ, ಹರಿಯಾಣದಲ್ಲೂ ಬ್ಲಾಕ್ ಔಟ್ ಮಾಡಲಾಗಿದೆ.
ಗುಜರಾತಿನ ನಾಲಿಯಾ ವಾಯು ನೆಲೆ ಗುರಿಯಾಗಿಸಿಕೊಂಡು ಡ್ರೋನ್ ದಾಳಿ ನಡೆಸಲಾಗುತ್ತಿದ್ದು, ದಾಳಿಯನ್ನು ಭಾರತೀಯ ಸೇನೆ ಯಶಸ್ವಿಯಾಗಿ ತಡೆದಿರುವುದಾಗಿ ವರದಿಯಾಗುತ್ತಿದೆ.