ಚೆನ್ನೈ: ಮೇ 4 ರಂದು ಅವಡಿಯ ಪಿಎಂ ಶ್ರೀ ಕೇಂದ್ರೀಯ ವಿದ್ಯಾಲಯ ಸಿಆರ್‌ಪಿಎಫ್ ಶಾಲೆಯ ಪರೀಕ್ಷಾ ಕೇಂದ್ರದಲ್ಲಿ ವಿದ್ಯುತ್ ಪೂರೈಕೆ ಸ್ಥಗಿತಗೊಂಡು ತೀವ್ರ ತೊಂದರೆ ಅನುಭವಿಸಿದ ಹದಿಮೂರು ವಿದ್ಯಾರ್ಥಿಗಳು ಮರು ಪರೀಕ್ಷೆ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಮದ್ರಾಸ್ ಹೈಕೋರ್ಟ್, ನೀಟ್-ಯುಜಿ 2025 ಫಲಿತಾಂಶ ಪ್ರಕಟಿಸದಂತೆ ತಾತ್ಕಾಲಿಕವಾಗಿ ತಡೆಹಿಡಿದಿದೆ.
ನ್ಯಾಯಮೂರ್ತಿ ವಿ ಲಕ್ಷ್ಮಿನಾರಾಯಣನ್ ಅವರು ಶುಕ್ರವಾರ ಮಧ್ಯಂತರ ಆದೇಶ ಹೊರಡಿಸಿದ್ದು, ರಾಷ್ಟ್ರೀಯ ಪರೀಕ್ಷಾ ಸಂಸ್ಥೆ(ಎನ್‌ಟಿಎ), ರಾಷ್ಟ್ರೀಯ ವೈದ್ಯಕೀಯ ಆಯೋಗ(ಎನ್‌ಎಂಸಿ) ಮತ್ತು ಇತರ ಪ್ರತಿವಾದಿಗಳಿಗೆ ತಮ್ಮ ಉತ್ತರ ಸಲ್ಲಿಸುವಂತೆ ನಿರ್ದೇಶಿಸಿ, ವಿಚಾರಣೆಯನ್ನು ಜೂನ್ 2ಕ್ಕೆ ಮುಂದೂಡಿದ್ದಾರೆ.
ಬಿರುಗಾಳಿ ಮತ್ತು ಭಾರೀ ಮಳೆಯಿಂದಾಗಿ ಮಧ್ಯಾಹ್ನ 3 ರಿಂದ ಸಂಜೆ 4.15 ರವರೆಗೆ ವಿದ್ಯುತ್ ಕಡಿತಗೊಂಡಿದ್ದರಿಂದ ಕೇಂದ್ರದಲ್ಲಿ ಪರೀಕ್ಷೆ ಬರೆಯುತ್ತಿದ್ದ ವಿದ್ಯಾರ್ಥಿಗಳ ಮೇಲೆ ತೀವ್ರ ಪರಿಣಾಮ ಬೀರಿದೆ ಎಂದು ವಕೀಲ ಟಿ ಸಾಯಿಕೃಷ್ಣನ್ ಅವರು ಹೇಳಿದರು.
ವಿದ್ಯುತ್ ಬ್ಯಾಕಪ್ ಅಥವಾ ಜನರೇಟರ್ ಇಲ್ಲದ ಕಾರಣ, ಅಭ್ಯರ್ಥಿಗಳು ಕಳಪೆ ಬೆಳಕಿನಲ್ಲಿ ಪರೀಕ್ಷೆಯನ್ನು ಮುಂದುವರಿಸಬೇಕಾಯಿತು. ಮಳೆನೀರು ಕೂಡ ಸಭಾಂಗಣಕ್ಕೆ ನುಗ್ಗಿತು ಮತ್ತು ಅನೇಕರನ್ನು ಪರೀಕ್ಷೆಯ ಮಧ್ಯದಲ್ಲಿ ಸ್ಥಳಾಂತರಿಸಲಾಯಿತು ಎಂದು ವಿದ್ಯಾರ್ಥಿಗಳ ಪರ ವಕೀಲರು ತಿಳಿಸಿದ್ದಾರೆ.
ಒಟ್ಟು 464 ವಿದ್ಯಾರ್ಥಿಗಳು ಈ ಕೇಂದ್ರದಲ್ಲಿ ಪರೀಕ್ಷೆ ಬರೆದಿದ್ದು, ಬಾಧಿತ ಅಭ್ಯರ್ಥಿಗಳಿಗೆ ಯಾವುದೇ ಹೆಚ್ಚುವರಿ ಸಮಯ ನೀಡಲಾಗಿಲ್ಲ ಮತ್ತು ಅವರಲ್ಲಿ ಹಲವರು ಪತ್ರಿಕೆಯನ್ನು ಪೂರ್ಣಗೊಳಿಸಲು ಸಾಧ್ಯವಾಗಿಲ್ಲ. ಇದರಿಂದಾಗಿ ದೇಶಾದ್ಯಂತ ಇತರರಿಗೆ ಹೋಲಿಸಿದರೆ ಅವರು ಗಂಭೀರ ಅನಾನುಕೂಲತೆಯನ್ನು ಅನುಭವಿಸಿದ್ದಾರೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.
ವಿದ್ಯಾರ್ಥಿಗಳು ಪರೀಕ್ಷೆಯ ದಿನದಂದು ಮರು ಪರೀಕ್ಷೆಯನ್ನು ಕೋರಿ NTA ಗೆ ಇಮೇಲ್ ಮಾಡಿದ್ದರು. ಆದರೆ ಇಲ್ಲಿಯವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಅರ್ಜಿಯಲ್ಲಿ ವಾದಿಸಲಾಗಿದೆ.
ನೀಟ್-ಯುಜಿ ಫಲಿತಾಂಶ ಜೂನ್ ಮಧ್ಯಭಾಗದೊಳಗೆ ಪ್ರಕಟಿಸುವ ಸಾಧ್ಯತೆ ಇದೆ. ಕಳೆದ ವರ್ಷ, ಜೂನ್ 4 ರಂದು ನೀಟ್-ಯುಜಿ ಫಲಿತಾಂಶ ಪ್ರಕಟಿಸಲಾಗಿತ್ತು.