ಕೋಲ್ಕತ್ತಾ: ಭಾರತ ಸರ್ಕಾರ ಆಪರೇಷನ್ ಸಿಂದೂರ್ ಹಾಗೂ ಪಾಕ್ ಉಗ್ರವಾದದ ಬಗ್ಗೆ ಜಾಗತಿಕ ಸಮುದಾಯಕ್ಕೆ ಮನವರಿಕೆ ಮಾಡಿಕೊಳ್ಳುವುದಕ್ಕಾಗಿ ಕೈಗೊಂಡಿರುವ ಬಹು-ಪಕ್ಷ ನಿಯೋಗ ಅಭಿಯಾನದಲ್ಲಿ ತಾನು ಭಾಗಿಯಾಗುವುದಿಲ್ಲ ಎಂದು ತೃಣಮೂಲ ಕಾಂಗ್ರೆಸ್ ಹೇಳಿದೆ.
ಕೇಂದ್ರ ಸರ್ಕಾರ 30ಕ್ಕೂ ಹೆಚ್ಚು ದೇಶಗಳಿಗೆ ಬಹು-ಪಕ್ಷ ನಿಯೋಗವನ್ನು ಕಳುಹಿಸುತ್ತಿದೆ. ಈ ಉಪಕ್ರಮದಲ್ಲಿ ಯಾವುದೇ ಪಕ್ಷದ ಸಂಸದರು ಅಥವಾ ಪಕ್ಷದ ನಾಯಕರು ಸೇರುವುದಿಲ್ಲ ಎಂದು ಟಿಎಂಸಿ ಸ್ಪಷ್ಟಪಡಿಸಿದೆ. ಬಹರಾಮ್‌ಪುರದ (ಟಿಎಂಸಿ) ಸಂಸದ ಯೂಸುಫ್ ಪಠಾಣ್ ನಿಯೋಗಗಳ ಭಾಗವಾಗಬಹುದು ಎಂದು ಈ ಹಿಂದೆ ವರದಿಯಾಗಿತ್ತು.
ಜಾಗತಿಕ ತಪ್ಪು ಮಾಹಿತಿಯನ್ನು ಎದುರಿಸಲು ಮತ್ತು ಭಯೋತ್ಪಾದನೆಯ ಬಗ್ಗೆ ಭಾರತದ ಶೂನ್ಯ-ಸಹಿಷ್ಣುತೆ ನೀತಿಯನ್ನು ಎತ್ತಿ ತೋರಿಸಲು ತಲಾ ಒಬ್ಬ ಸಂಸದರ ನೇತೃತ್ವದ ಏಳು ಗುಂಪುಗಳನ್ನು ಒಳಗೊಂಡಿರುವ ಬಹು-ಪಕ್ಷ ನಿಯೋಗ ಶೀಘ್ರವೇ ವಿದೇಶಗಳಿಗೆ ಭೇಟಿ ನೀಡಲಿದೆ.
ಮೂಲಗಳ ಪ್ರಕಾರ, ಪಠಾಣ್ ಅಥವಾ ಯಾವುದೇ ಇತರ ಟಿಎಂಸಿ ಸಂಸದರು ಪಾಕಿಸ್ತಾನದ ಗಡಿಯಾಚೆಗಿನ ಭಯೋತ್ಪಾದನೆಯ ವಿರುದ್ಧ ಪ್ರಚಾರ ಮಾಡಲು ವಿವಿಧ ದೇಶಗಳಿಗೆ ಭೇಟಿ ನೀಡುವ ಬಹು-ಪಕ್ಷ ನಿಯೋಗದಲ್ಲಿ ಭಾಗವಾಗಿರುವುದಿಲ್ಲ.
"ದೇಶವು ಎಲ್ಲಕ್ಕಿಂತ ಮಿಗಿಲು ಎಂದು ನಾವು ನಂಬುತ್ತೇವೆ ಮತ್ತು ನಮ್ಮ ಮಹಾನ್ ದೇಶವನ್ನು ರಕ್ಷಿಸಲು ಅಗತ್ಯವಿರುವ ಯಾವುದೇ ಕ್ರಮ ಕೈಗೊಳ್ಳಲು ಕೇಂದ್ರ ಸರ್ಕಾರಕ್ಕೆ ನಮ್ಮ ಬೆಂಬಲವನ್ನು ನೀಡುತ್ತೇವೆ. ನಮ್ಮ ಸಶಸ್ತ್ರ ಪಡೆಗಳು ನಮ್ಮ ರಾಷ್ಟ್ರವನ್ನು ಹೆಮ್ಮೆಪಡುವಂತೆ ಮಾಡಿವೆ ಮತ್ತು ನಾವು ಅವರಿಗೆ ಶಾಶ್ವತವಾಗಿ ಋಣಿಯಾಗಿದ್ದೇವೆ. ವಿದೇಶಾಂಗ ನೀತಿಯು ಸಂಪೂರ್ಣವಾಗಿ ಕೇಂದ್ರ ಸರ್ಕಾರದ ವ್ಯಾಪ್ತಿಯಲ್ಲಿದೆ. ಆದ್ದರಿಂದ, ಕೇಂದ್ರ ಸರ್ಕಾರ ಮಾತ್ರ ನಮ್ಮ ವಿದೇಶಾಂಗ ನೀತಿಯನ್ನು ನಿರ್ಧರಿಸಲಿ ಮತ್ತು ಅದರ ಸಂಪೂರ್ಣ ಜವಾಬ್ದಾರಿಯನ್ನು ತೆಗೆದುಕೊಳ್ಳಲಿ" ಎಂದು ಟಿಎಂಸಿ ಮೂಲಗಳು ತಿಳಿಸಿವೆ.
ಏಪ್ರಿಲ್ 22 ರಂದು 26 ಜೀವಗಳನ್ನು ಬಲಿ ಪಡೆದ ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಈ ಜಾಗತಿಕ ಸಂಪರ್ಕ ಸಾಧಿಸಲಾಗಿದೆ. ಪಹಲ್ಗಾಮ್ ದಾಳಿಗೆ ಪ್ರತಿಕ್ರಿಯೆಯಾಗಿ, ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಜಮ್ಮು ಮತ್ತು ಕಾಶ್ಮೀರ (ಪಿಒಜೆಕೆ) ದಲ್ಲಿನ ಭಯೋತ್ಪಾದಕ ನೆಲೆಗಳನ್ನು ಗುರಿಯಾಗಿಸಿಕೊಂಡು ಮೇ 7 ರಂದು ಆಪರೇಷನ್ ಸಿಂದೂರ್ ನ್ನು ಪ್ರಾರಂಭಿಸಲಾಯಿತು.