ರಾಜಸ್ಥಾನದ ಜೋಧಪುರ ಜಿಲ್ಲೆಯ ಫಲೋಡಿ ಪ್ರದೇಶದಲ್ಲಿ ಭಾನುವಾರ ಸಂಜೆ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು 18 ಜನರು ಸಾವನ್ನಪ್ಪಿದ್ದಾರೆ. ಮಾತೋಡಾ ಪೊಲೀಸ್ ಠಾಣೆ ಪ್ರದೇಶದಲ್ಲಿ ಟೆಂಪೋ ಟ್ರಾವೆಲ್ ನಡುವೆ ಟ್ರಕ್ ಮುಖಾಮುಖಿ ಡಿಕ್ಕಿ ಹೊಡೆದಿದೆ. ಪರಿಣಾಮ ಟೆಂಪೋ ಟ್ರಾವೆಲ್ ಬಸ್ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ.
ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿದ್ದು ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಅಪಘಾತದ ಸುದ್ದಿ ತಿಳಿದ ತಕ್ಷಣ ಪೊಲೀಸರು ಮತ್ತು ಆಡಳಿತ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ. ಗಾಯಾಳುಗಳನ್ನು ತಕ್ಷಣ ಹತ್ತಿರದ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಪೊಲೀಸರು ರಸ್ತೆಯನ್ನು ತೆರವುಗೊಳಿಸಿದ್ದಾರೆ.
ವರದಿಗಳ ಪ್ರಕಾರ, ಬಿಕಾನೇರ್‌ನ ಕೊಲಾಯತ್‌ಗೆ ಭೇಟಿ ನೀಡಲು ಜೋಧ್‌ಪುರದ ಸುರ್‌ಸಾಗರ್ ಪ್ರದೇಶದಿಂದ ಯಾತ್ರಿಕರನ್ನು ಕರೆದೊಯ್ಯುತ್ತಿದ್ದ ಟೆಂಪೋ ಟ್ರಾವಲರ್ ಹಿಂದಿರುಗುವ ಪ್ರಯಾಣದಲ್ಲಿ, ಮಾತೋಡಾ ಪ್ರದೇಶದಲ್ಲಿ ರಸ್ತೆಬದಿಯಲ್ಲಿ ನಿಲ್ಲಿಸಿದ್ದ ಟ್ರೇಲರ್‌ಗೆ ಬಸ್ ಡಿಕ್ಕಿ ಹೊಡೆದಿದೆ. ಡಿಕ್ಕಿಯ ಪರಿಣಾಮ ಬಸ್ ತೀವ್ರವಾಗಿ ಹಾನಿಗೊಳಗಾಗಿದ್ದು, ಹಲವಾರು ಪ್ರಯಾಣಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತರೆಲ್ಲರೂ ಜೋಧಪುರದ ಸುರ್ಸಾಗರ್ ಪ್ರದೇಶದ ನಿವಾಸಿಗಳು ಎಂದು ಹೇಳಲಾಗಿದೆ.
ಮಾಹಿತಿ ಪಡೆದ ಕೂಡಲೇ ಮಾತೋಡಾ ಪೊಲೀಸ್ ಠಾಣಾಧಿಕಾರಿ ಅಮನಾರಾಮ್ ಪೊಲೀಸ್ ತಂಡದೊಂದಿಗೆ ಸ್ಥಳಕ್ಕೆ ಆಗಮಿಸಿದರು. ಗ್ರಾಮಸ್ಥರ ಸಹಾಯದಿಂದ ಗಾಯಾಳುಗಳನ್ನು ಬಸ್‌ನಿಂದ ಹೊರತೆಗೆದು, ಪ್ರಥಮ ಚಿಕಿತ್ಸೆಯ ನಂತರ ಅವರನ್ನು ಜೋಧ್‌ಪುರಕ್ಕೆ ಕರೆದೊಯ್ಯಲಾಯಿತು. ಅಪಘಾತದಲ್ಲಿ ಇದುವರೆಗೆ 18 ಪ್ರಯಾಣಿಕರು ಸಾವನ್ನಪ್ಪಿದ್ದಾರೆ ಎಂದು ಠಾಣಾಧಿಕಾರಿ ಅಮನಾರಾಮ್ ತಿಳಿಸಿದ್ದಾರೆ.
ಪ್ರತ್ಯಕ್ಷದರ್ಶಿಗಳ ಪ್ರಕಾರ, ಪ್ರವಾಸಿ ಬಸ್ ಅತಿ ವೇಗದಲ್ಲಿ ಚಲಿಸುತ್ತಿತ್ತು ಮತ್ತು ಇದ್ದಕ್ಕಿದ್ದಂತೆ ನಿಯಂತ್ರಣ ತಪ್ಪಿ ಚಾಲಕ ಟ್ರಕ್ ಗೆ ಡಿಕ್ಕಿ ಹೊಡೆದಿದ್ದಾನೆ. ಅಪಘಾತದ ನಂತರ, ಒಳಗೆ ಸಿಲುಕಿದ್ದ ಪ್ರಯಾಣಿಕರನ್ನು ರಕ್ಷಿಸಲು ಸಾಕಷ್ಟು ಪ್ರಯತ್ನ ಪಡಬೇಕಾಯಿತು. ಘಟನೆಯ ಬಗ್ಗೆ ಮಾಹಿತಿ ಪಡೆದ ಆಡಳಿತ ಅಧಿಕಾರಿಗಳು ಸಹ ಸ್ಥಳಕ್ಕೆ ಆಗಮಿಸಿದರು. ಮೃತರನ್ನು ಗುರುತಿಸಲಾಗುತ್ತಿದೆ. ಆದರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಗ್ರಾಮಸ್ಥರ ದೊಡ್ಡ ಗುಂಪು ಸ್ಥಳದಲ್ಲಿ ಜಮಾಯಿತ್ತು.