ಜುಬೀನ್ ಗರ್ಗ್ ಸಾವಿನ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ಡಿಸೆಂಬರ್ 8 ರೊಳಗೆ ನ್ಯಾಯಾಲಯದಲ್ಲಿ ಆರೋಪಪಟ್ಟಿ ಸಲ್ಲಿಸಲಿದೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಸೋಮವಾರ ಹೇಳಿದ್ದಾರೆ. ಪ್ರಸಿದ್ಧ ಗಾಯಕನದ್ದು ಅಪಘಾತವಲ್ಲ, ಕೊಲೆ ಎಂದು ಮುಖ್ಯಮಂತ್ರಿ ಪುನರುಚ್ಚರಿಸಿದ್ದಾರೆ. ಜುಬೀನ್ ಗರ್ಗ್ ಕೊಲೆ ಪ್ರಕರಣದಲ್ಲಿ ಡಿಸೆಂಬರ್ 17ರ ಮೊದಲು ಅಂದರೆ ಡಿಸೆಂಬರ್ 8ರೊಳಗೆ ಆರೋಪಪಟ್ಟಿ ಸಲ್ಲಿಸುವ ಗುರಿಯನ್ನು ನಾನು ಹೊಂದಿದ್ದೇನೆ. ಅದಕ್ಕೆ ನಾವು ಸಿದ್ಧರಿದ್ದೇವೆ ಎಂದು ಸಿಎಂ ಹೇಳಿದರು.
ಘಟನೆ ವಿದೇಶದಲ್ಲಿ ನಡೆದಿರುವುದರಿಂದ, ಆರೋಪಪಟ್ಟಿ ಸಲ್ಲಿಸಲು ಗೃಹ ಸಚಿವಾಲಯ ಅನುಮತಿ ನೀಡುವುದನ್ನು ಖಚಿತಪಡಿಸಿಕೊಳ್ಳಲು ಮುಖ್ಯಮಂತ್ರಿ ಶರ್ಮಾ ನಿನ್ನೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದು ಮುಂದಿನ 3-4 ದಿನಗಳಲ್ಲಿ ಅನುಮೋದನೆ ಸಿಗಬಹುದು. ವಿದೇಶದಲ್ಲಿ ಒಂದು ಘಟನೆ ನಡೆದರೆ, ಆರೋಪ ಪಟ್ಟಿ ಸಲ್ಲಿಸುವ ಮೊದಲು ಗೃಹ ಸಚಿವಾಲಯದಿಂದ ಅನುಮೋದನೆ ಪಡೆಯುವುದು ಅವಶ್ಯಕ. ನಿನ್ನೆ, ನಾನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿದ್ದು ಶೀಘ್ರದಲ್ಲೇ ಅನುಮೋದನೆ ಸಿಗಬಹುದು.
ಮುಂದಿನ 3-4 ದಿನಗಳಲ್ಲಿ ಎಸ್‌ಐಟಿ ಗೃಹ ಸಚಿವಾಲಯಕ್ಕೆ ಪತ್ರ ಬರೆಯುತ್ತದೆ ಎಂದು ನಾನು ಭಾವಿಸುತ್ತೇನೆ. ನಮಗೆ ಅನುಮೋದನೆ ಸಿಗುತ್ತದೆ ಮತ್ತು ಡಿಸೆಂಬರ್ 7, 8 ಅಥವಾ 9 ರಂದು ನಾವು ಆರೋಪ ಪಟ್ಟಿ ಸಲ್ಲಿಸುತ್ತೇವೆ ಎಂದರು. ಜುಬೀನ್ ಗಾರ್ಗ್ ಸೆಪ್ಟೆಂಬರ್ 19ರಂದು ಸಿಂಗಾಪುರದಲ್ಲಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದರು. ಗಾಯಕ ಈಶಾನ್ಯ ಭಾರತ ಉತ್ಸವಕ್ಕಾಗಿ ಸಿಂಗಾಪುರಕ್ಕೆ ಹೋಗಿದ್ದರು.
ಜುಬೀನ್ ಗಾರ್ಗ್ ಸಾವು ಅಪಘಾತವಲ್ಲ ಕೊಲೆ ಎಂಬ ಅಸ್ಸಾಂ ಸಿಎಂ ಹಿಮಂತ್ ಬಿಸ್ವಾ ಶರ್ಮಾ ಹೇಳಿಕೆಗೆ ಪ್ರತಿಕ್ರಿಸಿರುವ ಕಾಂಗ್ರೆಸ್ ಸಂಸದ ಮತ್ತು ಅಸ್ಸಾಂ ಕಾಂಗ್ರೆಸ್ ಅಧ್ಯಕ್ಷ ಗೌರವ್ ಗೊಗೊಯ್, ಇದು ನಿಜಕ್ಕೂ ಕೊಲೆಯಾಗಿದ್ದರೆ ಸಾಕ್ಷ್ಯಗಳನ್ನು ಹಂಚಿಕೊಳ್ಳುವಂತೆ ಮುಖ್ಯಮಂತ್ರಿಯನ್ನು ಒತ್ತಾಯಿಸಿದರು. ಮುಖ್ಯಮಂತ್ರಿಗಳು ಇದು ಕೊಲೆ ಎಂದು ಹೇಳಿದರು. ಆದರೆ ಅದು ಹೇಗೆ ಸಂಭವಿಸಿತು ಎಂದು ಅವರು ನಮಗೆ ಹೇಳಲಿಲ್ಲ. ಗಾರ್ಗ್ ಕೊಲೆಯಾಗಿದ್ದರೆ, ಅದು ಹೇಗೆ ಸಂಭವಿಸಿತು ಎಂದು ಮುಖ್ಯಮಂತ್ರಿ ಜನರಿಗೆ ಹೇಳಬೇಕು ಎಂದು ಗೊಗೊಯ್ ಹೇಳಿದರು.