ಹೌರಾ: ಪಶ್ಚಿಮ ಬಂಗಾಳದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ(SIR) ನಡೆಯುತ್ತಿದ್ದು, ಹೌರಾ ಜಿಲ್ಲೆಯಲ್ಲಿ ಮಂಗಳವಾರ 30 ವರ್ಷದ ವ್ಯಕ್ತಿಯೊಬ್ಬ ತನ್ನ ಗುರುತಿನ ದಾಖಲೆಯಲ್ಲಿನ ದೋಷಗಳಿಂದ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಉಲುಬೇರಿಯಾ ಪ್ರದೇಶದ ಖಾಲಿಸಾನಿ ನಿವಾಸಿ ಜಹೀರ್ ಮಾಲ್ ಅವರು ಇಂದು ಬೆಳಗ್ಗೆ ತಮ್ಮ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಮೃತರ ಕುಟುಂಬವು, ಜಹೀರ್ ಅವರ ಅಧಿಕೃತ ದಾಖಲೆಗಳಲ್ಲಿ ಒಂದರಲ್ಲಿ ಕಾಗುಣಿತ ದೋಷ ಕಂಡುಬಂದ ನಂತರ ಅವರು ತೀವ್ರ ಒತ್ತಡದಲ್ಲಿದ್ದರು ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದು ಅಧಿಕಾರಿ ಹೇಳಿದ್ದಾರೆ.
ತಪ್ಪನ್ನು ಸರಿಪಡಿಸುವ ಪ್ರಯತ್ನದಲ್ಲಿ ಅವರು ಕಳೆದ ಕೆಲವು ವಾರಗಳಿಂದ ಸಂಬಂಧಪಟ್ಟ ಸ್ಥಳೀಯ ಕಚೇರಿಗಳಿಗೆ ಹಲವು ಬಾರಿ ಭೇಟಿ ನೀಡಿದ್ದರು. ಆದರೆ ಯಾವುದೇ ಫಲ ನೀಡದ ಹಿನ್ನೆಲೆಯಲ್ಲಿ ನೊಂದು ಆತ್ಮಹತ್ಯೆ ಮಾಡಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.
"SIR ಪ್ರಕ್ರಿಯೆಯ ಸಮಯದಲ್ಲಿ ಅವರ ಪೌರತ್ವ ಅಥವಾ ಮತದಾರರ ಅರ್ಹತೆ ಪರಿಶೀಲಿಸುವಲ್ಲಿ ಈ ದೋಷವು ತೊಡಕುಗಳಿಗೆ ಕಾರಣವಾಗಬಹುದು ಎಂದು ಜಹೀರ್ ಆತಂಕಗೊಂಡಿದ್ದರು" ಎಂದು ಅವರು ಹೇಳಿದ್ದಾರೆ.
ತೃಣಮೂಲ ಕಾಂಗ್ರೆಸ್(TMC) ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಅವರು ಸಚಿವ ಪುಲಕ್ ರಾಯ್ ಅವರಿಗೆ ದುಃಖಿತ ಕುಟುಂಬವನ್ನು ಭೇಟಿ ಮಾಡುವಂತೆ ಸೂಚಿಸಿದ್ದಾರೆ.
ರಾಯ್ ನಂತರ ಸಂಬಂಧಿಕರನ್ನು ಭೇಟಿ ಮಾಡಿ ಅವರಿಗೆ ಬೆಂಬಲ ನೀಡುವ ಭರವಸೆ ನೀಡಿದ್ದಾರೆ.