ಪೂರ್ವ ಚಂಪಾರಣ್: ಹರಿಯಾಣದಲ್ಲಿ ಮಾಡಿದಂತೆ" ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಮತ ಕಳ್ಳತನಕ್ಕೆ ಎನ್ ಡಿಎ ತಯಾರಿ ನಡೆಸುತ್ತಿದೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಗುರುವಾರ ಆರೋಪಿಸಿದ್ದಾರೆ.
ಸೀತಾಮರ್ಹಿ ಮತ್ತು ಪೂರ್ವ ಚಂಪಾರಣ್ ಜಿಲ್ಲೆಗಳಲ್ಲಿ ಸಾರ್ವಜನಿಕ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ, ಚುನಾವಣಾ ಆಯೋಗ (ಇಸಿ) ನಮ್ಮ ಸಂವಿಧಾನ ಮತ್ತು ಪ್ರಜಾಪ್ರಭುತ್ವ ಹಕ್ಕುಗಳನ್ನು ದುರ್ಬಲಗೊಳಿಸಲು ಸರ್ಕಾರದೊಂದಿಗೆ ಶಾಮೀಲಾಗುತ್ತಿದೆ ಎಂದು ದೂರಿದರು.
"ಹರಿಯಾಣದಲ್ಲಿ ಮತ ಕಳ್ಳತನ ಮಾಡಿದ್ದಂತೆ ಬಿಹಾರದಲ್ಲಿಯೂ 65 ಲಕ್ಷ ಮತಗಳನ್ನು ವೋಟರ್ ಲಿಸ್ಟ್ ನಿಂದ ಅಳಿಸುವ ಮೂಲಕ ಅದೇ ರೀತಿ ಮಾಡಲು ಅವರು ತಯಾರಿ ನಡೆಸುತ್ತಿದ್ದಾರೆ. ಕಳೆದ ವರ್ಷ ನಡೆದ ಹರಿಯಾಣ ವಿಧಾನಸಭಾ ಚುನಾವಣೆಯನ್ನು ಮತಗಳ್ಳತನ ನಡೆದಿದ್ದು,ಬಿಜೆಪಿ ಗೆಲುವಿನಲ್ಲಿ ಚುನಾವಣಾ ಆಯೋಗ ಶಾಮೀಲಾಗಿದೆ ಎಂದು ರಾಹುಲ್ ಗಾಂಧಿ ಬುಧವಾರ ಆರೋಪಿಸಿದ್ದರು.
2024 ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ರಾಯ್ ವಿಧಾನಸಭಾ ಕ್ಷೇತ್ರದ 10 ಬೂತ್‌ಗಳಲ್ಲಿ 22 ಬಾರಿ ಬಳಸಲಾದ ಬ್ರೆಜಿಲಿಯನ್ ಮಾಡೆಲ್ ಫೋಟೋವನ್ನು ಬಳಸಲಾಗಿತ್ತು ಎಂದು ಮಾಜಿ ಕಾಂಗ್ರೆಸ್ ಅಧ್ಯಕ್ಷರು ಸುದ್ದಿಗೋಷ್ಠಿಯಲ್ಲಿ ಹೇಳಿದ್ದರು.
"ರಾಹುಲ್ ಗಾಂಧಿಯವರ ಹೋರಾಟ ನಿಮಗಾಗಿ ಮತ್ತು ಸತ್ಯಕ್ಕಾಗಿ. ಮಹಾತ್ಮ ಗಾಂಧಿ ಒಮ್ಮೆ ಹೋರಾಡಿದ ಅದೇ ಯುದ್ಧವನ್ನು ಅವರು ನಡೆಸುತ್ತಿದ್ದಾರೆ. ಈ ದೇಶಕ್ಕೆ "ದ್ರೋಹ" ಮಾಡುತ್ತಿರುವವರನ್ನು ಜನರು "ಮರೆಯುವುದಿಲ್ಲ" ಎಂದು ವಾದ್ರಾ ಹೇಳಿದ್ದಾರೆ. ಚುನಾವಣಾ ಆಯುಕ್ತರಾದ ಜ್ಞಾನೇಶ್ ಕುಮಾರ್, ವಿವೇಕ್ ಜೋಶಿ ಮತ್ತು ಎಸ್ ಎಸ್ ಸಂಧು ಅವರು "ಭಾರತದ ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ಅಣಕಿಸುತ್ತಿದ್ದಾರೆ" ಎಂದು ಅವರು ಆರೋಪಿಸಿದರು.
"ಬಿಜೆಪಿ ನಾಯಕರು ಅಭಿವೃದ್ಧಿಗಾಗಿ ಅಲ್ಲ, ಧರ್ಮದ ಹೆಸರಿನಲ್ಲಿ ಎನ್‌ಡಿಎಗೆ ಮತ ಹಾಕುವಂತೆ ಜನರನ್ನು ಒತ್ತಾಯಿಸುತ್ತಿದ್ದಾರೆ. ಈ ಚುನಾವಣೆ ಮುಕ್ತ ಮತ್ತು ನ್ಯಾಯಯುತವಾಗಿದ್ದರೆ, ಬಿಹಾರದ ಜನರು ಈ ಸರ್ಕಾರವನ್ನು ಬೇರುಸಹಿತ ಕಿತ್ತುಹಾಕಿ ಬಡವರು, ಮಹಿಳೆಯರು ಮತ್ತು ಯುವಕರಿಗಾಗಿ ಕೆಲಸ ಮಾಡುವ ಸರ್ಕಾರಕ್ಕೆ ಮತ ಹಾಕುತ್ತಾರೆ" ಎಂದು ಅವರು ಹೇಳಿದರು. ರಾಜ್ಯದಲ್ಲಿನ "ಕಳಪೆ ಮೂಲಸೌಕರ್ಯ"ಕ್ಕಾಗಿ ಎನ್‌ಡಿಎ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಪ್ರಿಯಾಂಕಾ ಗಾಂಧಿ, ಬಿಹಾರದಲ್ಲಿ "ಕಳೆದ ಮೂರು ವರ್ಷಗಳಲ್ಲಿ 27 ಸೇತುವೆಗಳು ಕುಸಿದಿವೆ ಎಂದು ಹೇಳಿದರು.