ಗೋರಖ್‌ಪುರ (ಉತ್ತರ ಪ್ರದೇಶ): ಉತ್ತರ ಪ್ರದೇಶದ ಪ್ರತಿಯೊಂದು ಶಾಲೆ ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ 'ವಂದೇ ಮಾತರಂ' ಹಾಡುವುದನ್ನು ಕಡ್ಡಾಯಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೋಮವಾರ ತಿಳಿಸಿದ್ದಾರೆ.
ಗೋರಖ್‌ಪುರದಲ್ಲಿ ನಡೆದ 'ಏಕತಾ ಯಾತ್ರೆ' ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಈ ಕ್ರಮವು ಭಾರತ ಮಾತೆ ಮತ್ತು ಮಾತೃಭೂಮಿಯ ಬಗ್ಗೆ ನಾಗರಿಕರಲ್ಲಿ ಗೌರವ ಮತ್ತು ಹೆಮ್ಮೆಯ ಭಾವನೆಗಳನ್ನು ಪ್ರೇರೇಪಿಸುತ್ತದೆ ಎಂದು ಹೇಳಿದರು.
'ವಂದೇ ಮಾತರಂ ಗೀತೆಯ ಬಗ್ಗೆ ಗೌರವ ಭಾವನೆ ಇರಬೇಕು. ಉತ್ತರ ಪ್ರದೇಶದ ಪ್ರತಿಯೊಂದು ಶಾಲೆ ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಅದರ ಹಾಡುವಿಕೆಯನ್ನು ಕಡ್ಡಾಯಗೊಳಿಸುತ್ತೇವೆ' ಎಂದರು.
'ಜಿನ್ನಾಗಳು ಸೃಷ್ಟಿಯಾಗದಂತೆ ನೋಡಿಕೊಳ್ಳಿ'
'ಜಾತಿ, ಪ್ರದೇಶ, ಭಾಷೆಯ ಹೆಸರಿನಲ್ಲಿ ವಿಭಜಿಸುವ ಅಂಶಗಳನ್ನು ಗುರುತಿಸುವುದು ಮತ್ತು ಹೊಸ ಜಿನ್ನಾಗಳನ್ನು ಸೃಷ್ಟಿಸುವ ಪಿತೂರಿಯ ಭಾಗವಾಗಿರುವ ಅಂಶಗಳನ್ನು ಗುರುತಿಸುವುದು' ನಮ್ಮ ಕರ್ತವ್ಯ. ಭಾರತದಲ್ಲಿ ಮತ್ತೆಂದೂ ಹೊಸ ಜಿನ್ನಾ ಹುಟ್ಟಿಕೊಳ್ಳದಂತೆ ನಾವು ಖಚಿತಪಡಿಸಿಕೊಳ್ಳಬೇಕು... ವಿಭಜಕ ಉದ್ದೇಶ ಬೇರೂರುವ ಮೊದಲು ಅದನ್ನು ಹೂತುಹಾಕಬೇಕು' ಎಂದು ಯುಪಿ ಮುಖ್ಯಮಂತ್ರಿ ಹೇಳಿದರು.
1937ರಲ್ಲಿ 'ವಂದೇ ಮಾತರಂ' ಗೀತೆಯ ಪ್ರಮುಖ ಚರಣಗಳನ್ನು ಕೈಬಿಡಲಾಯಿತು, ಇದು ವಿಭಜನೆಗೆ ಕಾರಣವಾಯಿತು. ಅಂತಹ 'ವಿಭಜಕ ಮನಸ್ಥಿತಿ' ಇನ್ನೂ ದೇಶಕ್ಕೆ ಸವಾಲಾಗಿದೆ ಎಂದು ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದರು. ಮೋದಿ ಕ್ಷಮೆಯಾಚಿಸಬೇಕೆಂದು ಕಾಂಗ್ರೆಸ್ ಒತ್ತಾಯಿಸುತ್ತಿದೆ.