ನವದೆಹಲಿ: ದೆಹಲಿಯಲ್ಲಿ 12 ಮಂದಿಯ ಸಾವಿಗೆ ಕಾರಣವಾದ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೀಡಾಗಿರುವ ಲಕ್ನೋ ಮೂಲದ ಮಹಿಳಾ ವೈದ್ಯೆಗೆ ಪಾಕಿಸ್ತಾನ ಮೂಲದ ಭಯೋತ್ಪಾದಕ ಗುಂಪು ಜೈಶ್-ಎ-ಮೊಹಮ್ಮದ್ (ಜೆಇಎಂ) ಗೆ ಮಹಿಳಾ ವಿಭಾಗವನ್ನು ಸ್ಥಾಪಿಸುವ ಮತ್ತು ನೇಮಕಾತಿ ಮಾಡುವ ಜವಾಬ್ದಾರಿ ನೀಡಲಾಗಿತ್ತು ಎಂಬ ಸ್ಫೋಟಕ ಅಂಶ ಬಯಲಾಗಿದೆ.
ಈ ಬಗ್ಗೆ ಎನ್ ಡಿಟಿವಿ ವರದಿ ಮಾಡಿದ್ದು, ದೆಹಲಿ ಬಳಿಯ ಫರಿದಾಬಾದ್‌ನಲ್ಲಿ ನಡೆದ ಬೃಹತ್ ಸ್ಫೋಟಕಗಳ ಸಾಗಣೆಗೆ ಸಂಬಂಧಿಸಿದಂತೆ ಬಂಧಿಸಲ್ಪಟ್ಟಿರುವ ಲಕ್ನೋ ಮೂಲದ ಮಹಿಳಾ ವೈದ್ಯೆ ಡಾ. ಶಾಹೀನ್ ಶಾಹಿದ್ ಪಾಕಿಸ್ತಾನ ಮೂಲದ ಭಯೋತ್ಪಾದಕ ಗುಂಪು ಜೈಶ್-ಎ-ಮೊಹಮ್ಮದ್ (ಜೆಇಎಂ) ಗೆ ಮಹಿಳಾ ವಿಭಾಗವನ್ನು ಸ್ಥಾಪಿಸುವ ಮತ್ತು ನೇಮಕಾತಿ ಮಾಡುವ ಜವಾಬ್ದಾರಿಯನ್ನು ಹೊಂದಿದ್ದರು ಎಂದು ದೆಹಲಿ ಪೊಲೀಸ್ ಮೂಲಗಳು ತಿಳಿಸಿವೆ.
ಪಾಕಿಸ್ತಾನದಲ್ಲಿ ಜೆಇಎಂ ಸಂಸ್ಥಾಪಕ ಮಸೂದ್ ಅಜರ್ ಅವರ ಸಹೋದರಿ ಸಾದಿಯಾ ಅಜರ್ ನೇತೃತ್ವದ ಜೆಇಎಂನ ಮಹಿಳಾ ವಿಭಾಗವಾದ ಜಮಾತ್ ಉಲ್-ಮೊಮಿನಾತ್‌ನ ಕಮಾಂಡ್ ಅನ್ನು ಡಾ. ಶಾಹೀನ್ ಶಾಹಿದ್ ಅವರಿಗೆ ವಹಿಸಲಾಗಿತ್ತು. ಸಾದಿಯಾ ಅಜರ್ ಅವರ ಪತಿ ಯೂಸುಫ್ ಅಜರ್, ಕಂದಹಾರ್ ಅಪಹರಣದ ಮಾಸ್ಟರ್‌ಮೈಂಡ್ ಆಗಿದ್ದು, ಮೇ 7 ರಂದು ಆಪರೇಷನ್ ಸಿಂಧೂರ್ ಸಮಯದಲ್ಲಿ ಕೊಲ್ಲಲ್ಪಟ್ಟಿದ್ದ ಎಂದು ವರದಿಯಾಗಿದೆ.
ಯಾರು ಈ ಡಾ. ಶಾಹೀನ್ ಶಾಹಿದ್?
ವೈದ್ಯೆ ಶಹೀನ್ ಶಾಹಿದ್ ಲಕ್ನೋದ ಲಾಲ್ ಬಾಗ್ ನಿವಾಸಿ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಫರಿದಾಬಾದ್‌ನಲ್ಲಿ ಜೆಇಎಂನ ಭಯೋತ್ಪಾದನಾ ಮಾಡ್ಯೂಲ್ ಅನ್ನು ಪತ್ತೆಹಚ್ಚಲಾಗಿತ್ತು. ಬಳಿಕ ಅವರ ಕಾರಿನಿಂದ ಅಸಾಲ್ಟ್ ರೈಫಲ್ ಅನ್ನು ವಶಪಡಿಸಿಕೊಂಡ ನಂತರ ಅವರನ್ನು ಬಂಧಿಸಲಾಯಿತು. ಅಸಾಲ್ಟ್ ರೈಫಲ್, ಪಿಸ್ತೂಲ್ ಮತ್ತು ಮದ್ದುಗುಂಡುಗಳನ್ನು ಸಂಗ್ರಹಿಸಲು ಬಳಸಿದ ಕಾರು ಶಾಹೀನ್ ಶಾಹಿದ್‌ಗೆ ಸೇರಿದೆ ಎಂದು ತನಿಖಾಧಿಕಾರಿಗಳು ಪತ್ತೆ ಮಾಡಿದ್ದಾರೆ.
ಶಹೀನ್ ಅಲ್-ಫಲಾಹ್ ವಿಶ್ವವಿದ್ಯಾಲಯದ ಭಾಗವಾಗಿದ್ದರು ಎಂದು ಹೇಳಲಾಗಿದ್ದು, ಅಂತೆಯೇ ಫರಿದಾಬಾದ್‌ನಲ್ಲಿ ಬಾಡಿಗೆಗೆ ಪಡೆದಿದ್ದ ಎರಡು ಕೊಠಡಿಗಳಲ್ಲಿದ್ದ 2,900 ಕೆಜಿ ಸ್ಫೋಟಕಗಳು ಮತ್ತು ದಹನಕಾರಿ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಶ್ಮೀರಿ ವೈದ್ಯ ಮುಜಮ್ಮಿಲ್ ಗನೈ ಅಲಿಯಾಸ್ ಮುಸೈಬ್ ರ ಪಾತ್ರ ನಿಕಟವಾಗಿದೆ ಎಂದು ಹೇಳಲಾಗಿತ್ತು. ಇದೇ ವೈದ್ಯ ಮುಜಮ್ಮಿಲ್ ಗನೈ ಅಲಿಯಾಸ್ ಮುಸೈಬ್ ರೊಂದಿಗೂ ವೈದ್ಯೆ ಶಹೀನ್ ನಿಕಟ ಸಂಬಂಧ ಹೊಂದಿದ್ದಾರೆಂದು ತಿಳಿದುಬಂದಿದೆ.