ನವದೆಹಲಿ: ದೆಹಲಿ ಬಾಂಬ್ ಸ್ಫೋಟದಲ್ಲಿ ಬಳಸಲಾದ ಹುಂಡೈ ಐ20 ಕಾರಿನ ಫರಿದಾಬಾದ್ ನಿಂದ ಕೆಂಪು ಕೋಟೆ ಪ್ರದೇಶಕ್ಕೆ ತೆರಳಿರುವ ಬಗ್ಗೆ ತನಿಖಾಧಿಕಾರಿಗಳಿಗೆ ಮಾಹಿತಿ ಸಿಗುತ್ತಿದ್ದಂತೆಯೇ ಬದರ್ ಪುರ ಟೋಲ್ ಪ್ಲಾಜಾದಲ್ಲಿ ಕಾರು ಇರುವುದು ಹೊಸ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಸೆರೆಯಾಗಿದೆ. ಕಾರನ್ನು ಆತ್ಮಹತ್ಯಾ ಬಾಂಬರ್ ಎಂದು ಹೇಳಲಾಗುವ ಡಾ. ಉಮರ್ ಮೊಹಮ್ಮದ್ ಚಲಾಯಿಸುತ್ತಿದ್ದ ಎನ್ನಲಾಗಿದೆ.
ಸೋಮವಾರ ಬೆಳಿಗ್ಗೆ 8.13 ರ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಮೊಹಮ್ಮದ್ ಮಾಸ್ಕ್ ಧರಿಸಿ ಹರಿಯಾಣ ಮತ್ತು ದೆಹಲಿಯ ಗಡಿಯಲ್ಲಿರುವ ಟೋಲ್ ಪ್ಲಾಜಾದಲ್ಲಿ ರಶೀದಿ ಪಡೆಯುತ್ತಿರುವುದನ್ನು ಕಾಣಬಹುದು.
ಫರಿದಾಬಾದ್‌ನ ಏಷ್ಯನ್ ಆಸ್ಪತ್ರೆ ಬಳಿ ಬೆಳಿಗ್ಗೆ 7.30 ರ ಸುಮಾರಿಗೆ ಕಾರು ಕಾಣಿಸಿಕೊಂಡಿದ್ದು, ಬೆಳಿಗ್ಗೆ 8.13 ರ ಸುಮಾರಿಗೆ ಬದರ್ ಪುರ ಟೋಲ್ ಪ್ಲಾಜಾ ದಾಟಿ 8.20 ರ ಸುಮಾರಿಗೆ ಓಖ್ಲಾದಲ್ಲಿತ್ತು ಎಂದು ಮೂಲಗಳು ತಿಳಿಸಿವೆ.
ಕೆಂಪು ಕೋಟೆಯ ಬಳಿಯ ಪಾರ್ಕಿಂಗ್ ಸ್ಥಳದಲ್ಲಿ ಮಧ್ಯಾಹ್ನ 3.19 ರ ಸುಮಾರಿಗೆ ನಿಂತಿದ್ದ ಕಾರು, 6.30 ರ ಸುಮಾರಿಗೆ ನಿರ್ಗಮಿಸಿತ್ತು. ಈ ಸಮಯದಲ್ಲಿ ಬಹುಶಃ ಒಳಗೆ ಸ್ಫೋಟಕಗಳು ಪತ್ತೆಯಾಗುತ್ತವೆ ಎಂಬ ಭಯದಿಂದ ಮೊಹಮ್ಮದ್ ಒಂದು ನಿಮಿಷವೂ ಕಾರನ್ನು ಬಿಟ್ಟಿಲ್ಲ. ಇದಾದ ಕೇವಲ 22 ನಿಮಿಷಗಳ ನಂತರ ಒಂದು ಬದಿಯಲ್ಲಿ ಕೆಂಪು ಕೋಟೆ ಮತ್ತು ಇನ್ನೊಂದು ಬದಿಯಲ್ಲಿ ಜನದಟ್ಟಣೆಯ ಚಾಂದನಿ ಚೌಕ್ ಮಾರುಕಟ್ಟೆ ಇರುವ ಕೆಂಪು ಕೋಟೆ ಮೆಟ್ರೋ ನಿಲ್ದಾಣದ ಬಳಿಯ ನೇತಾಜಿ ಸುಭಾಷ್ ಮಾರ್ಗದಲ್ಲಿ ಐ20 ಕಾರು ನಿಧಾನವಾಗಿ ಚಲಿಸುತ್ತಿದ್ದಾಗ ಅದು ಸ್ಫೋಟಿಸಿದೆ.
ಸ್ಫೋಟದ ರಭಸಕ್ಕೆ ಐ20 ಕಾರಿನ ಭಾಗಗಳು ಛಿದ್ರಗೊಂಡು ರಸ್ತೆಯಲೆಲ್ಲಾ ಹರಡಿತ್ತು. ಸ್ಪೋಟ ಸಂಭವಿಸಿದ ಸ್ಥಳದ ಬಳಿ ಆರು ಕಾರುಗಳು ಮತ್ತು ಎರಡು ಇ-ರಿಕ್ಷಾಗಳು ಸೇರಿದಂತೆ ಒಂಬತ್ತು ವಾಹನಗಳು ಬೆಂಕಿಗೆ ಆಹುತಿಯಾಗಿವೆ.