ಕಾನ್ಪುರ: ಇತ್ತೀಚಿನ ದೆಹಲಿ ಸ್ಫೋಟದ ತನಿಖೆಗೆ ಸಂಬಂಧಿಸಿದಂತೆ ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಕಾನ್ಪುರದ ವೈದ್ಯಕೀಯ ವಿದ್ಯಾರ್ಥಿಯನ್ನು ಬಂಧಿಸಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
ರಾಜ್ಯ ಸರ್ಕಾರಿ ಸ್ವಾಮ್ಯದ ಗಣೇಶ್ ಶಂಕರ್ ವಿದ್ಯಾರ್ಥಿ ಸ್ಮಾರಕ (ಜಿಎಸ್‌ವಿಎಂ) ವೈದ್ಯಕೀಯ ಕಾಲೇಜಿನಲ್ಲಿ ಪ್ರಥಮ ವರ್ಷದ ಡಿಎಂ (ಹೃದಯಶಾಸ್ತ್ರ) ವಿದ್ಯಾರ್ಥಿಯಾಗಿರುವ 32 ವರ್ಷದ ಡಾ. ಮೊಹಮ್ಮದ್ ಆರಿಫ್ ಬಂಧನಕ್ಕೊಳಗಾಗಿರುವ ವೈದ್ಯನಾಗಿದ್ದಾನೆ. ಆತನನ್ನು ಬಹಿರಂಗಪಡಿಸದ ಸ್ಥಳದಿಂದ ವಶಕ್ಕೆ ಪಡೆಯಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.
ನಂತರ, ಎಟಿಎಸ್ ತಂಡ ನಜೀರಾಬಾದ್‌ನ ಅಶೋಕ್ ನಗರದಲ್ಲಿರುವ ಅವರ ಬಾಡಿಗೆ ವಸತಿಗೃಹವನ್ನು ಶೋಧಿಸಿ, ವಿಧಿವಿಜ್ಞಾನ ಪರೀಕ್ಷೆಗಾಗಿ ಅವರ ಮೊಬೈಲ್ ಫೋನ್ ಮತ್ತು ಲ್ಯಾಪ್‌ಟಾಪ್ ಅನ್ನು ವಶಪಡಿಸಿಕೊಂಡು, ವಿಚಾರಣೆಗಾಗಿ ದೆಹಲಿಗೆ ಕರೆದೊಯ್ಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಾಜಿ ಜಿಎಸ್‌ವಿಎಂ ಪ್ರಾಧ್ಯಾಪಕ ಡಾ. ಶಾಹೀನ್ ಸಯೀದ್ ಅವರ ವಿಚಾರಣೆಯ ಸಮಯದಲ್ಲಿ ಬಹಿರಂಗಪಡಿಸಿದ ಮಾಹಿತಿಯ ಆಧಾರದ ಮೇಲೆ ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಮೂಲದ ಆರಿಫ್, ಎಟಿಎಸ್ ಕಣ್ಗಾವಲಿನಲ್ಲಿದ್ದ.
ಜೈಶ್-ಎ-ಮೊಹಮ್ಮದ್ ಮತ್ತು ಅನ್ಸರ್ ಘಜ್ವತ್-ಉಲ್-ಹಿಂದ್ ಜೊತೆ ಸಂಪರ್ಕ ಹೊಂದಿರುವ "ವೈಟ್-ಕಾಲರ್ ಭಯೋತ್ಪಾದಕ ಮಾಡ್ಯೂಲ್" ತನಿಖೆಯ ಭಾಗವಾಗಿ ಅಲ್ ಫಲಾಹ್ ವಿಶ್ವವಿದ್ಯಾಲಯದೊಂದಿಗೆ ಸಂಪರ್ಕ ಹೊಂದಿರುವ ಸಯೀದ್ ಅವರನ್ನು ಬಂಧಿಸಲಾಗಿದೆ.
ದೆಹಲಿಯ ಕೆಂಪು ಕೋಟೆ ಬಳಿ ಸ್ಫೋಟದ ದಿನದಂದು, ಆರಿಫ್ ಡಾ. ಶಾಹೀನ್, ತಮ್ಮ ಜಾಲಕ್ಕೆ ಸಂಬಂಧಿಸಿದ ವ್ಯಕ್ತಿಗಳೊಂದಿಗೆ ದೂರವಾಣಿ ಸಂಪರ್ಕದಲ್ಲಿದ್ದರು.
ಅವರು ಇತ್ತೀಚೆಗೆ ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿದ್ದರು. ಇದು ಮತ್ತಷ್ಟು ಅನುಮಾನವನ್ನು ಹುಟ್ಟುಹಾಕಿತು. ಎಟಿಎಸ್ ಸಿಬ್ಬಂದಿ ಅವರ ನಿವಾಸವನ್ನು ತಲುಪಿದಾಗ, ಅವರು ತಮ್ಮ ಫೋನ್‌ನಿಂದ ಡೇಟಾವನ್ನು ಅಳಿಸಲು ಪ್ರಯತ್ನಿಸಿದರು ಎಂದು ಹೇಳಲಾಗುತ್ತದೆ, ಆದರೆ ಅಧಿಕಾರಿಗಳು ಸಮಯಕ್ಕೆ ಸರಿಯಾಗಿ ಸಾಧನವನ್ನು ವಶಪಡಿಸಿಕೊಂಡರು.
ಅವರ ಕರೆ ದಾಖಲೆಗಳು ಮತ್ತು ಚಾಟ್‌ಗಳ ಪ್ರಾಥಮಿಕ ವಿಶ್ಲೇಷಣೆಯು ಆಪಾದಿತ ಮಾಸ್ಟರ್‌ಮೈಂಡ್ ಮತ್ತು ಇತರ ಶಂಕಿತರೊಂದಿಗೆ ಸಂವಹನವನ್ನು ಸೂಚಿಸುತ್ತದೆ ಎಂದು ವರದಿಯಾಗಿದೆ.
ಈ ಉಗ್ರರ ಗುಂಪು ಡ್ರಾಫ್ಟ್ ಸಂದೇಶಗಳನ್ನು ವಿನಿಮಯ ಮಾಡಿಕೊಳ್ಳಲು shared email ID ಯನ್ನು ಬಳಸಿತ್ತು. ಇದು ಎಲೆಕ್ಟ್ರಾನಿಕ್ ಕಣ್ಗಾವಲು ತಪ್ಪಿಸಲು ಭಯೋತ್ಪಾದಕ ಸಂಘಟನೆಗಳು ಹೆಚ್ಚಾಗಿ ಬಳಸುವ ವಿಧಾನವಾಗಿದೆ.
ಉತ್ತರ ಪ್ರದೇಶ ಎಟಿಎಸ್ ನಿಂದ GSVM ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಯ ಬಂಧನ ವೈದ್ಯರು ಮತ್ತು ವಿದ್ಯಾರ್ಥಿಗಳಲ್ಲಿ, ವಿಶೇಷವಾಗಿ ಹೃದ್ರೋಗ ವಿಭಾಗದಲ್ಲಿ ತೀವ್ರ ಆತಂಕ, ಅಸಮಾಧಾನವನ್ನು ಉಂಟುಮಾಡಿದೆ.
"ಡಾ. ಆರಿಫ್ ಮೂರು ತಿಂಗಳ ಹಿಂದೆ ಅಖಿಲ ಭಾರತ ಕೌನ್ಸೆಲಿಂಗ್ ಮೂಲಕ ಇಲ್ಲಿಗೆ ಸೇರಿದರು. ಅವರು ಬುಧವಾರ ಮಧ್ಯಾಹ್ನ ಕರ್ತವ್ಯದಲ್ಲಿದ್ದರು ಮತ್ತು ನಂತರ ಕ್ಯಾಂಪಸ್‌ನ ಹೊರಗಿನ ಅವರ ವಸತಿಗೆ ಹೋದರು." ಎಂದು ಮುಖ್ಯ ವೈದ್ಯಕೀಯ ಅಧೀಕ್ಷಕ (ಹೃದಯಶಾಸ್ತ್ರ) ಡಾ. ಜ್ಞಾನೇಂದ್ರ ಹೇಳಿದ್ದಾರೆ.
"ಸಂಜೆ 7 ಗಂಟೆ ಸುಮಾರಿಗೆ, ಒಂದು ತಂಡ ಅವರನ್ನು ವಿಚಾರಣೆಗೆ ಕರೆದೊಯ್ದಿದೆ ಎಂದು ನಮಗೆ ತಿಳಿಸಲಾಯಿತು. ಅವರು ಕಾಶ್ಮೀರದವರಾಗಿದ್ದರು. ಅವರು ಬಂದು, ಸದ್ದಿಲ್ಲದೆ ಕೆಲಸ ಮಾಡಿ ಹೊರಡುತ್ತಿದ್ದರು" ಎಂದು ಡಾ. ಜ್ಞಾನೇಂದ್ರ ಹೇಳಿದ್ದಾರೆ.
ಮುನ್ನೆಚ್ಚರಿಕೆ ಕ್ರಮವಾಗಿ ಎಲ್ಲಾ ಪ್ರಥಮ, ದ್ವಿತೀಯ ಮತ್ತು ಮೂರನೇ ವರ್ಷದ ಹೃದ್ರೋಗ ವಿದ್ಯಾರ್ಥಿಗಳ ತಪಾಸಣೆಯನ್ನು ಪ್ರಾರಂಭಿಸಲಾಗಿದೆ ಎಂದು ಅವರು ಹೇಳಿದರು.
ಆರಿಫ್ ಅವರ ಮನೆ ಮಾಲೀಕ ಕನ್ಹಯ್ಯಾ ಲಾಲ್, ವೈದ್ಯರು ತಮ್ಮ ಮನೆಯ ಎರಡನೇ ಮಹಡಿಯಲ್ಲಿ ಮತ್ತೊಬ್ಬ ವೈದ್ಯ ಅಭಿಷೇಕ್ ಅವರೊಂದಿಗೆ ಸುಮಾರು ಒಂದು ತಿಂಗಳಿನಿಂದ ಬಾಡಿಗೆಗೆ ಇದ್ದಾರೆ ಎಂದು ಹೇಳಿದ್ದಾರೆ.
"ಸಂಜೆ 7:30 ರ ಸುಮಾರಿಗೆ, ನಾಲ್ಕು ಸದಸ್ಯರ ತಂಡವು ನೇರವಾಗಿ ಅವರ ಕೋಣೆಗೆ ಬಂದಿತು. "ಅವರು ಅದಾಗಲೇ ಕೀಲಿಗಳನ್ನು ಹೊಂದಿದ್ದರು, ಇಡೀ ಭಾಗವನ್ನು ಹುಡುಕಿ, ಅದನ್ನು ಮತ್ತೆ ಲಾಕ್ ಮಾಡಿ ಸದ್ದಿಲ್ಲದೆ ಹೊರಟುಹೋದರು" ಎಂದು ಲಾಲ್ ವರದಿಗಾರರಿಗೆ ತಿಳಿಸಿದರು.
ಆರಿಫ್ ಕೊಠಡಿಯನ್ನು ಬಾಡಿಗೆಗೆ ಪಡೆಯುವ ಮೊದಲು ತನ್ನ ಗುರುತಿನ ಚೀಟಿಯನ್ನು ಸಲ್ಲಿಸಿದ್ದರು ಮತ್ತು ಯಾವುದೇ ಅನುಮಾನಾಸ್ಪದ ಚಟುವಟಿಕೆ ಅಥವಾ ಅಸಾಮಾನ್ಯ ಸಂದರ್ಶಕರನ್ನು ಅವರು ಎಂದಿಗೂ ಗಮನಿಸಿಲ್ಲ ಎಂದು ಅವರು ಹೇಳಿದರು.
ಕಾನ್ಪುರ ಪೊಲೀಸ್ ಆಯುಕ್ತ ರಘುಬೀರ್ ಲಾಲ್ ಪಿಟಿಐಗೆ ಬಂಧನದ ಬಗ್ಗೆ ಮಾಹಿತಿ ನೀಡಿದ್ದು, ವರದಿಗಳನ್ನು ಪರಿಶೀಲಿಸಲು ತಂಡವನ್ನು ಕಳುಹಿಸಲಾಗಿದೆ ಎಂದು ಹೇಳಿದರು.
"ನಾವು ಸತ್ಯಗಳನ್ನು ಪರಿಶೀಲಿಸುತ್ತಿದ್ದೇವೆ. ದೃಢೀಕರಣದ ನಂತರವೇ ನಾನು ಪ್ರತಿಕ್ರಿಯಿಸುತ್ತೇನೆ" ಎಂದು ಲಾಲ್ ಹೇಳಿದ್ದಾರೆ. ಏತನ್ಮಧ್ಯೆ, ಡಾ. ಶಾಹೀನ್ ಜಾಲಕ್ಕೆ ಯಾವುದೇ ಹೆಚ್ಚುವರಿ ಸಂಪರ್ಕಗಳನ್ನು ಪತ್ತೆಹಚ್ಚಲು ಎಟಿಎಸ್ ಮತ್ತು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ತಂಡಗಳು ಕಾನ್ಪುರದಲ್ಲಿ ಕಾರ್ಯಾಚರಣೆಯನ್ನು ಮುಂದುವರಿಸಿವೆ. ತನಿಖೆ ಮುಂದುವರೆದಂತೆ ಹೆಚ್ಚಿನ ಹೆಸರುಗಳು ಹೊರಬರಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.