ಪಾಟ್ನಾ: 2025ರ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಕೇವಲ 25 ವರ್ಷದ ಜಾನಪದ ಗಾಯಕಿ ಹಾಗೂ ಬಿಜೆಪಿ ಅಭ್ಯರ್ಥಿ ಮೈಥಿಲಿ ಠಾಕೂರ್ ಇತಿಹಾಸ ನಿರ್ಮಿಸಿದ್ದಾರೆ.
ಬಿಹಾರದ ದರ್ಭಾಂಗಾದ ಅಲಿನಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಮೈಥಿಲಿ ಠಾಕೂರ್ ಅವರು ಅಮೋಘ ಜಯಬೇರಿ ಭಾರಿಸಿ ಇತಿಹಾಸ ನಿರ್ಮಿಸಿದ್ದಾರೆ.
ಬೆಳಗ್ಗೆ ಮತ ಎಣಿಕೆ ಆರಂಭವಾದಾಗಿನಿಂದ ಸತತ ಎಲ್ಲ ಸುತ್ತುಗಳಲ್ಲಿ ಮುನ್ನಡೆ ಕಾಯ್ದುಕೊಂಡಿರುವ ಮೈಥಿಲಿ ಠಾಕೂರ್ ಆರ್ ಜೆಡಿಯ ಹಿರಿಯ ನಾಯಕ ಬಿನೋದ್ ಮಿಶ್ರಾ ಅವರನ್ನು ಮಣಿಸಿ ಶಾಕ್ ನೀಡಿದ್ದಾರೆ.
ಬಿಜೆಪಿ ಮೈಥಿಲಿ ಠಾಕೂರ್ ಒಟ್ಟಾರೆ 74 ಸಾವಿರಕ್ಕೂ ಅಧಿಕ ಮತಗಳನ್ನು ಪಡೆದಿದ್ಗು ಆ ಮೂಲಕ ತಮ್ಮ ಸಮೀಪದ ಸ್ಪರ್ಧಿ ಆರ್ ಜೆಡಿಯ ಬಿನೋದ್ ಮಿಶ್ರಾ ಅವರಿಗಿಂತ 12 ಸಾವಿರಕ್ಕೂ ಅಧಿಕ ಮತಗಳನ್ನು ಪಡೆದು ಐತಿಹಾಸಿಕ ಜಯ ಸಾಧಿಸಿದ್ದಾರೆ.
ಐತಿಹಾಸಿಕ ಜಯ
ಅಲಿನಗರವು ಬ್ರಾಹ್ಮಣ ಪ್ರಾಬಲ್ಯದ ಕ್ಷೇತ್ರವಾಗಿದ್ದು, ಮುಸ್ಲಿಮರು, ಯಾದವರು ಮತ್ತು ಮಲ್ಹಾಗಳು ಮತ್ತು ಪಾಸ್ವಾನ್‌ಗಳಂತಹ ಅತ್ಯಂತ ಹಿಂದುಳಿದ ವರ್ಗಗಳ ಗಣನೀಯ ಜನಸಂಖ್ಯೆಯನ್ನು ಹೊಂದಿದೆ. ಇಲ್ಲಿ ಗೆಲುವು ಬಿಜೆಪಿಗೆ ಐತಿಹಾಸಿಕವಾಗಿರುತ್ತದೆ. ಅದು ಈ ಸ್ಥಾನವನ್ನು ಹಿಂದೆಂದೂ ಗೆದ್ದಿರಲಿಲ್ಲ. ಇದೀಗ ಇಂತಹ ಕ್ಲಿಷ್ಠ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ 25 ವರ್ಷದ ಮೈಥಿಲಿ ಠಾಕೂರ್ ಜಯ ಗಳಿಸಿ ಈ ಕ್ಷೇತ್ರದಿಂದ ಆಯ್ಕೆಯಾದ ಅಂತ್ಯಂತ ಕಿರಿಯ ಶಾಸಕಿ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.
ಆ ಮೂಲಕ ಬಿಹಾರದಲ್ಲಿ ಆಯ್ಕೆಯಾದ ಕಿರಿಯ ಶಾಸಕರಾದ ಗೋಹ್‌ನಿಂದ ಸೋನು ಕುಮಾರ್, ಬಟ್ನಾಹಾದಿಂದ ನವೀನ್ ಕುಮಾರ್ ಮತ್ತು ಅಮೃತಾ ಸೋನಿ, ಶೇಖ್‌ಪುರದಿಂದ ಕುಂದನ್ ಕುಮಾರ್, ಸುಪೌಲ್‌ನಿಂದ ಶಂಭು ಬಾಬು ಮತ್ತು ಸಿಮ್ರಿ ಭಕ್ತಿಯಾರ್‌ಪುರದಿಂದ ರಾಜ್‌ಕುಮಾರ್ ಸದಾ ಅವರ ಪಟ್ಟಿಗೆ ಸೇರಿದ್ದಾರೆ.
ಇಲ್ಲಿಯವರೆಗೆ, ರಾಜ್ಯದ ಅತ್ಯಂತ ಕಿರಿಯ ಶಾಸಕ ಎಂಬ ಕೀರ್ತಿಗೆ ಸ್ವತಂತ್ರ ಅಭ್ಯರ್ಥಿ ತೌಸೀಫ್ ಆಲಂ ಪಾತ್ರರಾಗಿದ್ದರು. 2005 ರಲ್ಲಿ 26 ನೇ ವಯಸ್ಸಿನಲ್ಲಿ ಅವರು ಆಯ್ಕೆಯಾಗಿದ್ದರು. ನಂತರ 2015 ರಲ್ಲಿ ಅದೇ ವಯಸ್ಸಿನಲ್ಲಿ ಆರ್‌ಜೆಡಿಯ ತೇಜಸ್ವಿ ಯಾದವ್ ವಿಧಾನಸಭೆಗೆ ಪ್ರವೇಶಿಸಿದ್ದರು.
ಇದೀಗ ಮೈಥಿಲಿ ಠಾಕೂರ್ ತಮ್ಮ 25ನೇ ವಯಸ್ಸಿನಲ್ಲಿ ಆಯ್ಕೆಯಾಗಿದ್ದಾರೆ.
ಅಲಿನಗರವು ಸಾಂಪ್ರದಾಯಿಕವಾಗಿ ಆರ್‌ಜೆಡಿಯ ಭದ್ರಕೋಟೆಯಾಗಿದ್ದು, ಅನುಭವಿ ಅಬ್ದುಲ್ ಬಾರಿ ಸಿದ್ದಿಕಿ ದೀರ್ಘಕಾಲದಿಂದ ಪ್ರತಿನಿಧಿಸುತ್ತಿದ್ದರು ಅಲ್ಲದೆ ಬರೊಬ್ಬರಿ 7 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ಆದರೆ ಅವರು 2015 ರ ಗೆಲುವಿನ ನಂತರ ಚುನಾವಣಾ ರಾಜಕೀಯದಿಂದ ದೂರ ಸರಿದಿದ್ದರು.
2020 ರಲ್ಲಿ, ಈ ಕ್ಷೇತ್ರ ಮಿಶ್ರಿ ಲಾಲ್ ಯಾದವ್ ಅವರಿಗೆ ವಿಕಾಸಶೀಲ್ ಇನ್ಸಾನ್ ಪಕ್ಷದ ಪಾಲಾಯಿತು. ನಂತರ ಅವರು ಕೇವಲ 3,000 ಕ್ಕೂ ಹೆಚ್ಚು ಮತಗಳ ಕಡಿಮೆ ಅಂತರದಿಂದ ಗೆದ್ದ ನಂತರ ಬಿಜೆಪಿ ಸೇರಿದ್ದರು. ಮೇ 2025 ರಲ್ಲಿ, ದರ್ಭಾಂಗಾದ ಸಂಸದ-ಶಾಸಕ ನ್ಯಾಯಾಲಯವು 2019 ರ ಕ್ರಿಮಿನಲ್ ಪ್ರಕರಣದಲ್ಲಿ ಅವರಿಗೆ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿತು. ನಂತರ ಬಿಜೆಪಿ ಅವರ ಬದಲಿಗೆ ಮೈಥಿಲಿ ಠಾಕೂರ್ ಅವರನ್ನು ನೇಮಿಸಲು ನಿರ್ಧರಿಸಿತು. ಯಾದವ್ ಅಕ್ಟೋಬರ್ 11 ರಂದು ಪಕ್ಷವನ್ನು ತೊರೆದರು.
ಯಾರು ಈ ಮೈಥಿಲಿ ಠಾಕೂರ್?
ಮಿಥಿಲಾ ಪ್ರದೇಶದಿಂದ ಸುಮಾರು 35 ಕಿ.ಮೀ ದೂರದಲ್ಲಿರುವ ನೆರೆಯ ಮಧುಬನಿ ಜಿಲ್ಲೆಯ ಬೇಣಿಪಟ್ಟಿಯಿಂದ ಬಂದ ಠಾಕೂರ್ ಭಾರತೀಯ ಶಾಸ್ತ್ರೀಯ ಮತ್ತು ಭಕ್ತಿ ಸಂಗೀತದಲ್ಲಿ ತರಬೇತಿ ಪಡೆದಿದ್ದಾರೆ. ಬಿಹಾರ ಚುನಾವಣೆಗೆ ಬಿಜೆಪಿ ಪಕ್ಷವು 71 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಪ್ರಕಟಿಸಿದ ಕೂಡಲೇ ಅವರು ಅಕ್ಟೋಬರ್‌ನಲ್ಲಿ ಬಿಜೆಪಿ ಸೇರಿದ್ದರು.
ಈ ವೇಳೆ ಮಾತನಾಡಿದ್ದ ಮೈಥಿಲಿ, 'ಪಕ್ಷ ನನಗೆ ಯಾವುದೇ ಸೂಚನೆಗಳನ್ನು ನೀಡಿದರೆ ನಾನು ಅದನ್ನು ಅನುಸರಿಸುತ್ತೇನೆ ಎಂದು ಹೇಳಿದ್ದರು.