ರಾಂಚಿ: ಜಾರ್ಖಂಡ್ ರಾಜಧಾನಿ ರಾಂಚಿಯಲ್ಲಿರುವ ಡ್ಯಾಮ್ ಗೆ ಕಾರು ಉರುಳಿ ಬಿದ್ದ ಪರಿಣಾಮ ಜೆಮ್ಶೆಡ್‌ಪುರದ ಪ್ರಧಾನ ಜಿಲ್ಲಾ ನ್ಯಾಯಾಧೀಶರ ಇಬ್ಬರು ಅಂಗರಕ್ಷಕರು ಸೇರಿದಂತೆ ಮೂವರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಮತ್ತು ಒಬ್ಬರು ನಾಪತ್ತೆಯಾಗಿದ್ದಾರೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
ಶುಕ್ರವಾರ ತಡರಾತ್ರಿ ನಾಗ್ರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ರಾಂಚಿಯ ಹಟಿಯಾ ಅಣೆಕಟ್ಟಿನಲ್ಲಿ ಈ ಅಪಘಾತ ಸಂಭವಿಸಿದೆ ಎಂದು ಅವರು ಹೇಳಿದ್ದಾರೆ.
"ನಮಗೆ ಸಿಕ್ಕಿರುವ ಮಾಹಿತಿ ಪ್ರಕಾರ ಕಾರಿನಲ್ಲಿ ನಾಲ್ಕು ಜನರಿದ್ದರು. ಇಲ್ಲಿಯವರೆಗೆ ನಾವು ಕಾರಿನ ಚಾಲಕ ಮತ್ತು ಇಬ್ಬರು ಪೊಲೀಸ್ ಸಿಬ್ಬಂದಿಯ ಶವಗಳನ್ನು ಪತ್ತೆಹಚ್ಚಿದ್ದೇವೆ. ಒಬ್ಬರು ಇನ್ನೂ ಕಾಣೆಯಾಗಿದ್ದಾರೆ" ಎಂದು ಹಟಿಯಾ ಪೊಲೀಸ್ ಉಪ ವರಿಷ್ಠಾಧಿಕಾರಿ(ಡಿಎಸ್‌ಪಿ) ಪ್ರಮೋದ್ ಮಿಶ್ರಾ ಪಿಟಿಐಗೆ ತಿಳಿಸಿದ್ದಾರೆ.
ಆರಂಭಿಕ ತನಿಖೆಯ ಪ್ರಕಾರ ಕಾರು ಚಾಲಕನ ನಿಯಂತ್ರಣ ಕಳೆದುಕೊಂಡು ಪಲ್ಟಿಯಾಗಿ ಡ್ಯಾಮ್ ಗೆ ಉರುಳಿ ಬಿದ್ದಿದೆ ಎಂದು ಅವರು ಹೇಳಿದ್ದಾರೆ.
ಅಪಘಾತ ಸಂಭವಿಸಿದಾಗ ಕಾರು ಜಮ್ಶೆಡ್‌ಪುರದಿಂದ ಬರುತ್ತಿತ್ತು ಎಂದು ಅವರು ತಿಳಿಸಿದ್ದಾರೆ.
ಪ್ರಧಾನ ಜಿಲ್ಲಾ ನ್ಯಾಯಾಧೀಶರ ಅಂಗರಕ್ಷಕರನ್ನು ರಾಬಿನ್ ಕುಜೂರ್ ಮತ್ತು ಉಪೇಂದ್ರ ಕುಮಾರ್ ಸಿಂಗ್ ಎಂದು ಗುರುತಿಸಲಾಗಿದೆ. ಈ ಇಬ್ಬರೂ ಜಾರ್ಖಂಡ್ ಪೊಲೀಸ್ ಕಾನ್‌ಸ್ಟೆಬಲ್‌ಗಳಾಗಿ ನೇಮಕಗೊಂಡಿದ್ದರು.