ಮ್ಹೋವ್: ದೆಹಲಿ ಸ್ಫೋಟದಲ್ಲಿ ತನಿಖೆ ಎದುರಿಸುತ್ತಿರುವ ಅಲ್ ಫಲಾಹ್ ವಿಶ್ವವಿದ್ಯಾಲಯದ ಅಧ್ಯಕ್ಷ ಜಾವೇದ್ ಸಿದ್ದಿಕಿ ಅವರ ಸಹೋದರನನ್ನು ಮಧ್ಯಪ್ರದೇಶ ಪೊಲೀಸರು ಮ್ಹೋವ್‌ನಲ್ಲಿ ನಡೆದ ಆರ್ಥಿಕ ವಂಚನೆಗೆ ಸಂಬಂಧಿಸಿದಂತೆ ಹೈದರಾಬಾದ್‌ನಲ್ಲಿ ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
25 ವರ್ಷಗಳ ಹಿಂದೆ ಮಧ್ಯಪ್ರದೇಶದ ಮ್ಹೋವ್‌ನಲ್ಲಿ ದೊಡ್ಡ ಪ್ರಮಾಣದ ಹಣಕಾಸು ವಂಚನೆ ಎಸಗಿದ ಆರೋಪದ ಮೇಲೆ ಹಮೂದ್ ಅಹ್ಮದ್ ಸಿದ್ದಿಕಿ ಅವರನ್ನು ಭಾನುವಾರ ಹೈದರಾಬಾದ್‌ನಲ್ಲಿ ಬಂಧಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
"2000ದಲ್ಲಿ ನಕಲಿ ಖಾಸಗಿ ಬ್ಯಾಂಕ್ ಸ್ಥಾಪಿಸಿ, ನೂರಾರು ನಿವಾಸಿಗಳಿಗೆ ಠೇವಣಿ ದ್ವಿಗುಣಗೊಳಿಸುವ ಭರವಸೆ ನೀಡಿ ಕೋಟ್ಯಾಂತರ ರೂ. ಸಂಗ್ರಹಿಸಿದ ನಂತರ ಹಮೂದ್ ಸಿದ್ದಿಕಿ ಮ್ಹೋವ್‌ನಿಂದ ನಾಪತ್ತೆಯಾಗಿದ್ದರು.
ಅಲ್ ಫಲಾಹ್ಹಗರಣ ಬೆಳಕಿಗೆ ಬಂದ ಕೂಡಲೇ ಅವರು ತಮ್ಮ ಕುಟುಂಬದೊಂದಿಗೆ ಪರಾರಿಯಾಗಿದ್ದರು. ಇದರಿಂದಾಗಿ ಅಧಿಕಾರಿಗಳು ದಶಕಗಳಿಂದ ಅವರನ್ನು ಹುಡುಕುತ್ತಿದ್ದರು.
ನಿನ್ನೆ ಹೈದರಾಬಾದ್‌ನಲ್ಲಿ ವಂಚಕ ಸಿದ್ದಿಕಿಯನ್ನು ಬಂಧಿಸಲಾಯಿತು ಎಂದು ಮ್ಹೋವ್ ಉಪ ವಿಭಾಗೀಯ ಪೊಲೀಸ್ ಅಧಿಕಾರಿ ಲಲಿತ್ ಸಿಂಗ್ ಸಿಕಾರ್ವಾರ್ ಅವರು ಪಿಟಿಐಗೆ ತಿಳಿಸಿದ್ದಾರೆ.
ಮ್ಹೋವ್ ಪೊಲೀಸರು ಜಾವೇದ್ ಸಿದ್ದಿಕಿಯ ಹಿನ್ನೆಲೆಯನ್ನು ಮರುಪರಿಶೀಲಿಸಲು ಪ್ರಾರಂಭಿಸಿದ ನಂತರ ಅವರನ್ನು ಬಂಧಿಸಲಾಯಿತು ಎಂದು ಅಧಿಕಾರಿ ತಿಳಿಸಿದ್ದಾರೆ.
ಗಮನಾರ್ಹವಾಗಿ, ದೆಹಲಿ ಸ್ಫೋಟದ ಪ್ರಮುಖ ಆರೋಪಿ ಡಾ. ಉಮರ್ ಉನ್ ನಬಿ, ಜಾವೇದ್ ಸಿದ್ದಿಕಿ ಅಧ್ಯಕ್ಷರಾಗಿರುವ ಅಲ್ ಫಲಾಹ್ ವಿಶ್ವವಿದ್ಯಾಲಯದ ವಿದ್ಯಾರ್ಥಿಯಾಗಿದ್ದಾರೆ.
ಫರಿದಾಬಾದ್ ಭಯೋತ್ಪಾದನಾ ಘಟಕ, ಪ್ರಕರಣದ ತನಿಖೆ ನಡೆಸುತ್ತಿದ್ದು, ನಕಲಿ ಮತ್ತು ವಂಚನೆಗಾಗಿ ವಿಶ್ವವಿದ್ಯಾಲಯದ ವಿರುದ್ಧ ದಾಖಲಾಗಿರುವ ಎರಡು ಪ್ರಕರಣಗಳಿಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಅಲ್ ಫಲಾಹ್ ವಿಶ್ವವಿದ್ಯಾಲಯದ ಅಧ್ಯಕ್ಷರಿಗೆ ಎರಡು ಸಮನ್ಸ್ ಜಾರಿ ಮಾಡಿದ್ದಾರೆ ಎಂದು ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ.