ಪಾಟ್ನಾ: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವಿನ ನಂತರ ನೂತನ ಎನ್‌ಡಿಎ ಸರ್ಕಾರ ನವೆಂಬರ್ 20 (ಗುರುವಾರ) ರಂದು ಪಾಟ್ನಾದ ಐತಿಹಾಸಿಕ ಗಾಂಧಿ ಮೈದಾನದಲ್ಲಿ ಪ್ರಮಾಣವಚನ ಸ್ವೀಕರಿಸಲಿದೆ. ಆದಾಗ್ಯೂ, ನಿತೀಶ್ ಕುಮಾರ್ ದಾಖಲೆಯ ಹತ್ತನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಾರೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಬಿಹಾರದಲ್ಲಿ ನೂತನ ಎನ್‌ಡಿಎ ಸರ್ಕಾರ ರಚನೆಗೆ ವೇದಿಕೆ ಸಿದ್ಧವಾಗುತ್ತಿರುವುದರಿಂದ ಪ್ರಧಾನಿ ನರೇಂದ್ರ ಮೋದಿ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ವಿಧಾನಸಭಾ ಚುನಾವಣಾ ಪ್ರಚಾರದ ಸಮಯದಲ್ಲಿ ಒಂದು ಡಜನ್‌ಗೂ ಹೆಚ್ಚು ರ‍್ಯಾಲಿಗಳನ್ನು ಉದ್ದೇಶಿಸಿ ಮಾತನಾಡಿದ್ದ ಪ್ರಧಾನಿ ಮೋದಿ, ನೂತನ ಎನ್‌ಡಿಎ ಸರ್ಕಾರದ ಪ್ರಮಾಣವಚನ ಸ್ವೀಕಾರಕ್ಕೆ ಬರುತ್ತೇನೆ ಎಂದು ಹೇಳಿದ್ದರು.
ಮತ್ತೆ ಬಿಹಾರದ ಮುಖ್ಯಮಂತ್ರಿ ಆಗಲು ಎನ್‌ಡಿಎ ಮಿತ್ರಪಕ್ಷಗಳ ಬೆಂಬಲ ಹೊಂದಿರುವ ನಿತೀಶ್ ಕುಮಾರ್ ಇಂದು ಬೆಳಿಗ್ಗೆ 11:30 ಕ್ಕೆ ತಮ್ಮ ಕೊನೆಯ ಸಚಿವ ಸಂಪುಟ ಸಭೆಯ ಅಧ್ಯಕ್ಷತೆ ವಹಿಸಲಿದ್ದು, ಸಂಪುಟ ವಿಸರ್ಜನೆ ಮಾಡುವ ನಿರ್ಧಾರ ಅಂಗೀಕರಿಸಲಾಗುತ್ತದೆ. ನಂತರ ನಿತೀಶ್ ಕುಮಾರ್ ತಮ್ಮ ರಾಜೀನಾಮೆಯನ್ನು ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರಿಗೆ ಸಲ್ಲಿಸುತ್ತಾರೆ ಎಂದು ತಿಳಿಸಿದರು.
ವಿಧಾನಸಭೆಯನ್ನು ವಿಸರ್ಜಿಸುವ ಪ್ರಸ್ತಾವನೆಯೊಂದಿಗೆ ನಿತೀಶ್ ಕುಮಾರ್ ಅವರನ್ನು ರಾಜಭವನದಲ್ಲಿ ರಾಜ್ಯಪಾಲರನ್ನು ಭೇಟಿ ಮಾಡಲು "ಅಧಿಕಾರ" ನೀಡುವ ನಿರ್ಣಯ ಅಂಗೀಕರಿಸಲಾಗುವುದು ಎಂದು ಜೆಡಿಯು ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ.
ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಎನ್‌ಡಿಎಯಿಂದ ಚುನಾಯಿತರಾದ ಸದಸ್ಯರ ಪಟ್ಟಿಯೊಂದಿಗೆ ಮುಖ್ಯ ಚುನಾವಣಾ ಅಧಿಕಾರಿ ವಿನೋದ್ ಸಿಂಗ್ ಗುಂಜಿಯಾಲ್ ಭಾನುವಾರ ರಾಜ್ಯಪಾಲರನ್ನು ಭೇಟಿಯಾದ ನಂತರ ಈ ಬೆಳವಣಿಗೆಯಾಗಿದೆ. ಬಿಹಾರ ವಿಧಾನಸಭಾ ಚುನಾವಣೆಯಲ್ಲಿ NDA 202 ಸ್ಥಾನಗಳನ್ನು ಗಳಿಸಿತು. ಬಿಜೆಪಿ 89 ಸ್ಥಾನ ಪಡೆಯುವುದರೊಂದಿಗೆ ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ
ಜೆಡಿಯು 85, ಎಲ್ ಜೆಪಿ 19, ಇತರ 9 ಕ್ಷೇತ್ರಗಳಲ್ಲಿ ಹಿಂದೂಸ್ತಾನಿ ಅವಾಮಿ ಮೋರ್ಚಾ, ರಾಷ್ಟ್ರೀಯ ಲೋಕ ಮೋರ್ಚಾ, ಕಾಂಗ್ರೆಸ್, ಆರ್ ಜೆಡಿ ಹಾಗೂ ಮೂರು ಎಡ ಪಕ್ಷಗಳನ್ನು ಒಳಗೊಂಡಿರುವ ಮಹಾಘಟಬಂಧನ್ 35 ಸ್ಥಾನ ಗಡಿಯನ್ನು ದಾಟಲು ಹೆಣಗಾಡಿದೆ.
ಬಿಹಾರದಲ್ಲಿ ಸರ್ಕಾರ ರಚನೆ ಕುರಿತು ಬಿಜೆಪಿಯ ವರಿಷ್ಠರೊಂದಿಗೆ ಸಭೆ ನಡೆಸಲು ದೆಹಲಿಗೆ ಬಂದಿದ್ದ ಜೆಡಿಯು ಕಾರ್ಯಾಧ್ಯಕ್ಷ ಸಂಜಯ್ ಕುಮಾರ್ ಝಾ ಭಾನುವಾರ ನಿತೀಶ್ ಕುಮಾರ್ ಅವರನ್ನು ಭೇಟಿಯಾದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕೆಲವೇ ದಿನಗಳಲ್ಲಿ ಹೊಸ ಸರ್ಕಾರ ರಚನೆಯಾಗಲಿದೆ. ಎನ್‌ಡಿಎ ಪ್ರಣಾಳಿಕೆಯಲ್ಲಿ ನಾವು ನೀಡಿರುವ ಎಲ್ಲಾ ಭರವಸೆಗಳನ್ನು ಈಡೇರಿಸಲು ನಾವು ಬದ್ಧರಾಗಿದ್ದೇವೆ ಎಂದು ಹೇಳಿದರು.
ಹೆಸರನ್ನು ಬಹಿರಂಗಪಡಿಸಲು ಇಚ್ಛಿಸದ ಜೆಡಿಯು ನಾಯಕರೊಬ್ಬರು, ನಮ್ಮ ಪಕ್ಷವು ಕೇವಲ 12 ಸಚಿವರನ್ನು ಹೊಂದಿದ್ದ ಕೊನೆಯ ಸಂಪುಟಕ್ಕಿಂತ ಹೊಸ ಸಂಪುಟದಲ್ಲಿ ಹೆಚ್ಚಿನ ಪ್ರಾತಿನಿಧ್ಯವನ್ನು ಎದುರು ನೋಡುತ್ತಿದೆ ಎಂದು ಹೇಳಿದರು.
ಈ ಮಧ್ಯೆ ಎಲ್ ಜೆಪಿ ಹೊಸ ಸರ್ಕಾರ ಸೇರಲು ಎದುರು ನೋಡುತ್ತಿದೆ ಎಂದು ಚಿರಾಗ್ ಪಾಸ್ವಾನ್ ಹೇಳಿದರು. ಆದರೆ ತಮ್ಮ ಪಕ್ಷ ಉಪ ಮುಖ್ಯಮಂತ್ರಿ ಹುದ್ದೆಯ ಮೇಲೆ ಕಣ್ಣಿಟ್ಟಿದೆಯೇ ಎಂಬ ಪ್ರಶ್ನೆಗೆ ಅವರು ಉತ್ತರಿಸಲಿಲ್ಲ. ನಿರ್ಗಮಿತ ಸರ್ಕಾರದಲ್ಲಿ, ಬಿಜೆಪಿಯ ಸಾಮ್ರಾಟ್ ಚೌಧರಿ ಮತ್ತು ವಿಜಯ್ ಕುಮಾರ್ ಸಿನ್ಹಾ ಇಬ್ಬರೂ ಉಪ ಮುಖ್ಯಮಂತ್ರಿಗಳಾಗಿದ್ದಾರೆ.